ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ವಿರುದ್ಧ ಕಣಕ್ಕಿಳಿಯುತ್ತಾರಂತೆ ಸೋದರತ್ತೆ ಪಿ.ರಾಜೇಶ್ವರಿ ವಿಜಯ್ ಕುಮಾರ್

ವಾಟ್ಸಪ್ ಸಂದೇಶ ಹರಿದಾಡಿದ ನಂತರ ಕಾವೇರಿದ ಚರ್ಚೆ

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್‌ ನ ಘೋಷಿತ ಅಭ್ಯರ್ಥಿಯಾಗಿ ಹಿತಕರ ವಾತಾವರಣ ಅನುಭವಿಸುತ್ತಿರುವ ಶ್ರೇಯಸ್ ಪಟೇಲ್ ಅವರನ್ನು ಕಟ್ಟಿಹಾಕಲು ಅವರ ಸೋದರತ್ತೆಯನ್ನೇ ಎದುರಾಳಿಯಾಗಿ ಕಣಕ್ಕಿಸಲು ಯತ್ನ ನಡೆಯುತ್ತಿದೆಯೇ?

ಸಾಮಾಜಿಕ ಜಾಲತಾಣ ವಾಟ್ಸಪ್ ಗುಂಪುಗಳಲ್ಲಿ ರಾಜೇಶ್ವರಿ ವಿಜಯಕುಮಾರ್ ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ ಎನ್ನುವ ಸಂದೇಶ ಭಾನುವಾರ ಬೆಳಗ್ಗೆಯಿಂದ ಬಿರುಸಿನಿಂದ ಸುತ್ತು ಹೊಡೆಯುತ್ತಿದೆ.

ಆ‌ ಸಂದೇಶ ಇಂತಿದೆ:
ಹಾಸನ ಜಿಲ್ಲೆಯಲ್ಲಿ ರೋಚಕ ರಾಜಕೀಯ ತಿರುವು ಕಾಣಲಿದೆ ಜಿಲ್ಲೆಯ ಪ್ರಭಾವಿ ರಾಜಕಾರಣಿ ಹಾಗೂ ಬಿಜೆಪಿ ಹಿರಿಯ ಮುಖಂಡರು ಹಾಗೂ ಮಾಜಿ ಸಚಿವರಾದ ಶ್ರೀಯುತ ಅಣ್ಣಯ್ಯ @ ಹೆಚ್.ಸಿ ಶ್ರೀಕಂಠಯ್ಯ ನವರ ಸೊಸೆ ಹಾಗೂ ಹಾಸನದ ಮಾಜಿ ಸಂಸದರಾದ ದಿವಂಗತ ಶ್ರೀ ಜಿ.ಪುಟ್ಟಸ್ವಾಮಿಗೌಡರ ಮಗಳನ್ನು ಈ ಬಾರಿ ಶ್ರೀ ನರೇಂದ್ರ ಮೋದಿಯವರ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ದಿಸುವ ಬಗ್ಗೆ ಸ್ವತಃ ಅವರ ಕುಟುಂಬವೇ ತಿಳಿಸಿವೆ.

ಈ ಸಂದೇಶ ರೆಕ್ಕೆಪುಕ್ಕ ಕಟ್ಟಿಕೊಂಡು ವೇಗವಾಗಿ ಹರಡುತ್ತಿದ್ದು, ಹಾಸನ ಲೋಕಸಭಾ ಕ್ಷೇತ್ರದ ಚರ್ಚೆಯ ಕಾವು ಹೆಚ್ಚಿಸಿದೆ.

ಮಾಜಿ ಸಚಿವ ದಿವಂಗತ ಜಿ.ಪುಟ್ಟಸ್ವಾಮಿಗೌಡ ಅವರ ಪುತ್ರಿಯಾದ ರಾಜೇಶ್ವರಿ ಅವರ ಪತಿ, ಮಾಜಿ ಸಚಿವ ಎಚ್.ಸಿ.ಶ್ರೀಕಂಠಯ್ಯ ಅವರ ಪುತ್ರ ಎಚ್.ಎಸ್. ವಿಜಯ್ ಕುಮಾರ್ ಅವರೂ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ರಾಜೇಶ್ವರಿ ಅವರ ಸಹೋದರನ ಪುತ್ರ ಶ್ರೇಯಸ್ ಪಟೇಲ್ ಪಾಲಾಗಿತ್ತು.

ಹೀಗಾಗಿ ಅಸಮಾಧಾನಿತರಾಗಿರುವ ರಾಜೇಶ್ವರಿ ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಗೆ ಟಾಂಗ್ ನೀಡುವ ಯತ್ನ ನಡೆಯುತ್ತಿರುವುದು ಕುತೂಹಲ ಮೂಡಿಸಿದೆ.

ಈ ಸಂಬಂಧ ಪ್ರತಿಕ್ರಿಯೆಗೆ ರಾಜೇಶ್ವರಿ ಅವರು ಲಭ್ಯರಾಗಿಲ್ಲ.