ವರ್ಷದ ಹಿಂದೆ ಪ್ರಿಯತಮೆ ಸೂಸೈಡ್.. ತಿಥಿ ದಿನದಂದೇ ಪ್ರಿಯಕರನ ಮರ್ಡರ್!

ವಿಜಯಪುರ ಜ28: ವಿಜಯಪುರ ಜಿಲ್ಲೆಯಲ್ಲಿ ಹಾಡಹಗಲೇ ಗುಂಡಿನ ದಾಳಿ ನಡೆದಿದ್ದು, ವರ್ಷದ ಹಿಂದೆ ಸುಸೈಡ್ ಮಾಡಿಕೊಂಡಿದ್ದ ಪ್ರಿಯತಮೆಯ ತಿಥಿಯಂದೇ ಪ್ರಿಯಕರನ ಹತ್ಯೆ ನಡೆದಿದೆ. ಶವದ ಪಕ್ಕದಲ್ಲೇ ಬಿದ್ದಿದ್ದ ಕಿವಿಯ ತುಂಡು ಮರ್ಡರ್ ಕ್ಲೂ ನೀಡಿದೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಅರಕೇರಿ ಗ್ರಾಮದ ಮನಾವರ ದೊಡ್ಡಿ ಬಳಿ ಘಟನೆ ನಡೆದಿದ್ದು, ಕಾರಿನಲ್ಲಿ ಬರುತ್ತಿದ್ದ ತಿಕೋಟಾ ತಾಲೂಕಿನ ಅರಕೇರಿ ತಾಂಡಾ1 ನಿವಾಸಿ ಸತೀಶ್ ರಾಠೋಡ್ ಹತ್ಯೆಯಾಗಿದ್ದಾನೆ. ಅದೇ ತಾಂಡಾದ ರಮೇಶ ಚೌಹಾಣ್ ಹಾಗೂ ಆತನ ಸಹಚರರು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪ್ರೀತಿಸಿದ ಯುವತಿಯ ಮನೆಗೆ ಪ್ರಿಯಕರ ಸತೀಶ್ ರಾಥೋಡ್ ಹೆಣ್ಣು ಕೇಳಲು ಹೋದಾಗ ಆಕೆಯ ಕುಟುಂಬದವರು ನಿರಾಕರಿಸಿದ್ದರಿಂದ ವರ್ಷದ ಹಿಂದೆಯಷ್ಟೇ ಪ್ರಿಯತಮೆ ಆತ್ಮಹತ್ಯೆಗೆ ಶರಣಾಗಿದ್ದಳು. ಯುವತಿ ಸಾವಿಗೆ ಯುವಕನೇ ಕಾರಣ ಎಂದು ಕುಟುಂಬಸ್ಥರು ಸೇಡು ತೀರಿಸಿಕೊಂಡಿದ್ದಾರೆ ಎಂದು ಮೃತನ‌ ತಂದೆ ಪ್ರೇಮ್ ಸಿಂಗ್ ಆರೋಪವಾಗಿದೆ.

ಕಳೆದ ವರ್ಷ ಜನವರಿ 28 ರಂದು ರಮೇಶ್ ಚೌವ್ಹಾಣ್ ಪುತ್ರಿ ಭಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಘಟನೆಗೆ ಸತೀಶ್ ರಾಠೋಡ್ ಕಾರಣ ಎಂದು ರಮೇಶ್ ಚೌವ್ಹಾಣ್ ಗರಂ ಆಗಿದ್ದರು. ಹೀಗಾಗಿ ಮಗಳು ಸತ್ತು ಒಂದು ವರ್ಷವಾದ ದಿನವೇ ಸತೀಶ್ ನನ್ನು ಗುಂಡಿನ ದಾಳಿ ಮಾಡಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಬಂದೂಕು ಹಾಗೂ ಕಿವಿ ಪತ್ತೆಯಾಗಿರುವುದು ಪ್ರಕರಣದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಜೊತೆಗೆ ಚಾಕು ಸಹ ಮೃತದೇಹದ ಪಕ್ಕದಲ್ಲೇ‌ ಬಿದ್ದಿರೋದ್ರಿಂದ ಗಲಾಟೆ ನಡೆದು ಬಳಿಕ ಹತ್ಯೆ ಮಾಡಲಾಗಿದೆ ಅನ್ನೋ ಶಂಕೆ ವ್ಯಕ್ತವಾಗಿದೆ.

ಘಟನಾ‌ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವಿಜಯಪುರ ಗ್ರಾಮೀಣ ಪೊಲೀಸರ ತನಿಖೆ ಬಳಿಕ ಘಟನೆಗೆ ಕಾರಣ ತಿಳಿದುಬರಬೇಕಿದೆ.