ಹಾಸನದಲ್ಲಿ ಮಳೆ ಅಬ್ಬರ; ಜನಜೀವನ ಅಸ್ತವ್ಯಸ್ತ-ರಸ್ತೆಗಳು ಜಲಾವೃತ

ನಗರದ ಜನರಿಗೆ ಸಂಕಟ| ಕೃಷಿಕರಿಗೆ ಸಂತೋಷ| ಒಣಗಿದ ಕೆರೆಗಳಿಗೆ ಜೀವಜಲ|

ಹಾಸನ: ಜಿಲ್ಲೆಯ ವಿವಿಧೆಡೆ ವರುಣನ ಅಬ್ಬರ ಮುಂದುವರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾನುವಾರದ ಶಾಪಿಂಗ್, ಸಮಾರಂಭಗಳಲ್ಲಿ ಭಾಗವಹಿಸುವ ಓಡಾಟಗಳಿಗೆ ಮಳೆ ಬ್ರೇಕ್ ಹಾಕಿದೆ.

ನಗರದಲ್ಲಿ ಭಾನುವಾರ ಮಧ್ಯಾಹ್ನ ಆರಂಭಗೊಂಡ ಮಳೆ ಎಡಬಿಡದೆ ಸುರಿಯಿತು. ಕೆಲ ಹೊತ್ತು ಬಿಡುವಿನ ನಂತರ ಸಂಜೆಯೂ ಆರ್ಭಟಿಸಿತು.

ಕಡಿಮೆ ಅವಧಿಯಲ್ಲಿ ಭಾರಿ ಪ್ರಮಾಣದ ಮಳೆ ಸುರಿದಿದ್ದರಿಂದ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲಾರದೆ ರಸ್ತೆಗಳು ಜಾಲವೃತಗೊಂಡಿದ್ದವು.

ನಗರದ ಬಿಎಸ್ ಎನ್ಎಲ್ ಭವನದ ಎದುರು ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾಗಿ ವಾಹನಗಳ ಸುಗುಮ ಸಂಚಾರಕ್ಕೆ ಅಡ್ಡಿಯಾಯಿತು. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಮಳೆ ಆರಂಭದೊಂದಿಗೆ ಕೃಷಿ ಚಟುವಟಿಕೆಗಳೂ ಗರಿಗೆದರಿವೆ. ಒಣಗಿ ನಿಂತ ಕೆರೆಗಳ ಒಡಲಿಗೆ ನೀರು ಸೇರುತ್ತಿದೆ.