ಅಂಗಡಿಗೆ ತೆರಳುತ್ತಿದ್ದವನನ್ನು‌ ಸೊಂಡಿಲಿನಿಂದ ಎತ್ತಿ ಎಸೆದ ಕಾಡಾನೆ

ಹಾಸನ; ಅಂಗಡಿಗೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ ಮಾಡಿ ಸೊಂಡಿಲಿನಿಂದ ಎತ್ತಿ ಬಿಸಾಡಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ವಡೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಹೇಶ್ (47) ಕಾಡಾನೆ ದಾಳಿಯಿಂದ ಗಾಯಗೊಂಡ ವ್ಯಕ್ತಿ. ಮಹೇಶ್ ತಮ್ಮ ಮನೆಯಿಂದ ಸ್ವಲ್ಪ ದೂರಲ್ಲಿದ್ದ ಅಂಗಡಿಯಿಂದ ಸಾಮಾಗ್ರಿ ತರಲು ತೆರಳುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿ ಸೊಂಡಲಿನಿಂದ ಎತ್ತಿ ಬಿಸಾಡಿದ್ದು, ಮಹೇಶ್ ಕಿರುಚಾಟ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಓಡಿ ಬಂದಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಕಾಡಾನೆ ಕಾಫಿ ತೋಟದೊಳಗೆ ಹೋಗಿದೆ.‌ ಮಹೇಶ್‌ ಸೊಂಟದ ಭಾಗಕ್ಕೆ ಪೆಟ್ಟಾಗಿದ್ದು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ‌.

ಕಾಫಿ ತೋಟದೊಳಗೆ ಕಾಡಾನೆ ಬೀಡುಬಿಟ್ಟಿದ್ದು ಗ್ರಾಮಸ್ಥರು ಓಡಾಡಲು ಭಯಪಡುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಕಾಡಾನೆಯನ್ನು ಅರಣ್ಯಕ್ಕೆ ಓಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.