ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಈ ಹಿಂದೆ RSS ಕಾರ್ಯಕರ್ತರನ್ನು ಅವಹೇಳನ ಮಾಡಿ ಭಾಷಣ ಮಾಡಿದ್ದ ಹಳೇ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಎಚ್ಚೆತ್ತ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಸಂಪೂರ್ಣವಾಗಿ ತಿಳಿಯದೆ ಮಾತನಾಡಿದ್ದೆ ಎಂದು ಕ್ಷಮೆ ಕೇಳಿದ್ದಾರೆ.
ಕಳೆದ ಚುನಾವಣೆ ವೇಳೆ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಪ್ರಜ್ವಲ್ ಮಾಡಿದ್ದ ಭಾಷಣ ಫೇಸ್ ಬುಕ್ ಹಾಗೂ ವಾಟ್ಸಪ್ ನಲ್ಲಿ ಹರಿಬಿಡಲಾಗಿದ್ದು, ಅದು ವೈರಲ್ ಆಗಿತ್ತು. ಇದರಿಂದ ಬಿಜೆಪಿ ಕಾರ್ಯಕರ್ತರ ಮನೆಗೆ ಎಡತಾಕುತ್ತಿರುವ ಅವರು ಮುಜುಗರ ಅನುಭವಿಸುವಂತಾಗಿತ್ತು.
ಈ ಸಂಬಂಧ ಬಿಜೆಪಿ, ಆರ್ ಎಸ್ ಎಸ್ ಕಾರ್ಯಕರ್ತರು, ಮುಖಂಡರಿಗೆ ವಾಟ್ಸಪ್ ಸಂದೇಶ ಕಳಿಸಿ ಕ್ಷಮೆ ಕೋರುವ ಮೂಲಕ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ.
ಪ್ರಜ್ವಲ್ ರೇವಣ್ಣ ಸಂದೇಶ ಇಲ್ಲಿದೆ;
ಈ ಮುಂಚೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ, RSS ಬಗ್ಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ.
ಸಂಘದ ಕಾರ್ಯ, ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ, ತಮ್ಮ ವಯಕ್ತಿಕ ಜೀವನ ಬಿಟ್ಟು ಯಾವುದೆ ಫಲಪೇಕ್ಷೆ ಇಲ್ಲದೆ ತಮ್ಮನ್ನು ತಾವು ಸಂಪೂರ್ಣ ಸಮರ್ಪಣೆ ಮಾಡಿಕೊಂಡ ಸಾವಿರಾರು ಪ್ರಚಾರಕರು ತಮ್ಮ ದೈನಿಂದಿನ ಬದುಕಿನ ಹಲವು ಸಮಸ್ಯೆ ಮತ್ತು ಸವಾಲು ಮದ್ಯೆ ಸಂಘದ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯಾವುದೆ ವಯಕ್ತಿಕ ಫಲಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುವ ಲಕ್ಷಾಂತರ ಸ್ವಯಂ ಸೇವಕರ ಮದ್ಯೆ ಕಾರ್ಯ ನಿರ್ವಹಿಸಲು ಪುಣ್ಯ ಪಡೆದಿರಬೇಕು.
ಈ ಹಿಂದೆ ನನಗೆ RSS ಸಂಪರ್ಕ ಇರಲಿಲ್ಲ, ಆದಕಾರಣ RSS ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ಇರಲಿಲ್ಲ, ಆ ಸಂದರ್ಭದ, ಆ ಸಮಯದ ಪರಿಸ್ಥಿಯಲ್ಲಿ RSS ಬಗ್ಗೆ ಕೆಲವೊಂದು ಮಾತನಾಡಿದ್ದೇ, ಈಗ RSS ಬಗ್ಗೆ ತಿಳಿದು ಕೊಂಡಿದ್ದೇನೆ, ತಿಳಿದು ಕೊಳ್ಳುತ್ತಿದ್ದೇನೆ ಈ ಹಿಂದೆ RSS ಬಗ್ಗೆ ಸಂಪೂರ್ಣ ಅರಿವಿಲ್ಲದೆ ಮಾತನಾಡಿದ್ದು, ಸಂಘದ ಪ್ರಚಾರಕರು ಮತ್ತು ಸ್ವಯಂ ಸೇವಕರಿಗೆ, ಸಂಘದ ಹಿತೈಷಿ ಗಳಿಗೆ ನೋವುಂಟಾಗಿದೆ, ಈ ನಿಟ್ಟಿನಲ್ಲಿ ನಾನು ಎಲ್ಲ ಪ್ರಚಾರಕರು, ಸ್ವಯಂ ಸೇವಕರಲ್ಲಿ ಕ್ಷಮೆ ಕೇಳುತ್ತೇನೆ.
ಈ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ನಾನು ನಿಮ್ಮೊಂದಿಗೆ ಅಳಿಲು ಸೇವೆ ಸಲ್ಲಿಸಲು ಆಶೀರ್ವಾದ ಮಾಡಿ, ಹರಸಿ ಅವಕಾಶ ಕೊಡಿ ಅಂತ ಕೇಳಿಕೊಳ್ಳುತ್ತೇನೆ.
ಭಾರತ್ ಮಾತಾಕಿ ಜೈ