ಹಾಸನ : ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಬಿಯರ್ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ ನ್ಯೂನ್ಯತೆ ಕಂಡು ಬಂದ 9 ಕೋಟಿ ರೂ ಮೌಲ್ಯದ ಬಿಯರ್ ವಶಪಡಿಸಿಕೊಂಡಿದ್ದಾರೆ.
ಹಾಸನ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ವುಡ್ಪೆಕರ್ ಡಿಸ್ಟಿಲರಿಸ್ ಆ್ಯಂಡ್ ಬ್ರಿವರೀಸ್ ಫ್ಯಾಕ್ಟರಿ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ನ್ಯೂನತೆ ಕಂಡು ಬಂದ ಪವರ್ ಕೂಲ್, ಲೆಜೆಂಡ್, ಬ್ಲಾಕ್ಫೋರ್ಟ್, ವುಡ್ಪೆಕರ್ ಬ್ರಾಂಡ್ನ ಸೇರಿ ಒಟ್ಟು 56,236 ಬಾಕ್ಸ್ಗಳಲ್ಲಿ 5,63,756.88 ಲೀಟರ್ ಬಿಯರ್ ವಶಪಡಿಸಿಕೊಂಡರು.
ವಶಕ್ಕೆ ಪಡೆದ ಬಿಯರ್ ಒಟ್ಟು ಮೌಲ್ಯ 9,54,08,422 ರೂ. ಆಗಿದೆ. ವುಡ್ಪೆಕರ್ ಡಿಸ್ಟಿಲರಿಸ್ ಸನ್ನದುದಾರರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಅಲ್ಲದೇ ಮಾ.16 ರಿಂದ ಏ.6 ರವರೆಗೆ ಜಿಲ್ಲೆಯ ವಿವಿಧೆಡೆ ಅಬಕಾರಿ ಇಲಾಖೆ ಅಧಿಕಾರಿಗಳು ವಿವಿಧೆಡೆ ದಾಳಿ ಮಾಡಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ವಿರುದ್ಧ ಒಟ್ಟು 944 ಪ್ರಕರಣಗಳು ದಾಖಲು ಮಾಡಿದ್ದಾರೆ.
ಇದರಲ್ಲಿ 3,488.185 ಲೀಟರ್ ಮದ್ಯ, 5,64,362 ಲೀಟರ್ ಬಿಯರ್, 34 ಲೀಟರ್ ವೈನ್, 14 ಲೀಟರ್ ಸೇಂದಿ ಸೇರಿದೆ. ಜತೆಗೆ 51 ವಿವಿಧ ರೀತಿಯ ವಾಹನಗಳನ್ನು ವಶಕ್ಕೆ ಪಡೆದಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಒಟ್ಟು 10,48,76,148 ರೂ ಮೌಲ್ಯದ ಮದ್ಯ ವಶಕ್ಕೆ ಪಡೆದು 970 ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.