ಅರ್ಜುನ ದುರಂತ ಸಾವು ಪ್ರಕರಣ; ತನಿಖಾ ತಂಡದಿಂದ ಅವಲೋಕನ

ಸಕಲೇಶಪುರ: ಅಂಬಾರಿ ಅರ್ಜುನ ವೀರ ಮರಣ ಹಿನ್ನೆಲೆಯಲ್ಲಿ ತನಿಖಾ ತಂಡ ಇಂದು ಅರ್ಜುನ ಹುತಾತ್ಮನಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ ನಿವೃತ್ತ ಮುಖ್ಯ ವನ್ಯ ಪಾಲಕರಾದ (ವನ್ಯಜೀವಿ ವಿಭಾಗ) ಅಜಯ್ ಮಿಶ್ರಾ ಮೊದಲಾದವರು ಆಗಮಿಸಿ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಕಲೇಶಪುರ ತಾಲ್ಲೂಕಿನ ಯಸಳೂರು ವಲಯದ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಕಳೆದ ಡಿ.೪ ರಂದು ಕ್ಯಾಪ್ಟನ್ ಅರ್ಜುನ ಹೋರಾಡಿ ವೀರ ಮರಣ ಹೊಂದಿದ್ದ.
ಇದಾದ ಬಳಿಕ ಅರ್ಜುನನ ಕಾಲಿಗೆ ಗುಂಡೇಟು ಬಿದ್ದು ಶಕ್ತಿ ಕಳೆದುಕೊಂಡು ಮೃತಪಟ್ಟಿದೆ. ಅರ್ಜುನನ ಸಾವಿಗೆ ಅರಣ್ಯಾಧಿಕಾರಿಗಳು, ವೈದ್ಯರ  ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಲಾಗಿತ್ತು. ಹಿರಿಯ ಪರಿಸರವಾದಿಗಳು, ಮಾವುತರು ಎಲ್ಲರೂ ಗಂಭೀರ ಆರೋಪ ಮಾಡಿದ್ದರು.
ಅರ್ಜುನನ ಬಲಗಾಲಿಗೆ ಗುಂಡೇಟು ತಗುಲಿತ್ತು, ದಾಳಿ ಮಾಡಲು ಮುಂದಾದ ಕಾಡಾನೆಗೆ ಹೊಡೆಯುವ ಗುಂಡೇಟು ಆಕಸ್ಮಿಕವಾಗಿ ಅರ್ಜುನನ ಕಾಲಿಗೆ ಬಿದ್ದಿತ್ತು. ಈ ಕಾರಣದಿಂದಲೇ ವೀರಾಗ್ರಣಿ ಅರ್ಜುನ ಜೀವ ಕಳೆದುಕೊಂಡ ಎಂದು ಆರೋಪಿಸಲಾಗಿತ್ತು.
ಕಾಡಾನೆ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಾಕಷ್ಟು ಲೋಪ ಎಸಗಿತ್ತು, ಮುಂಜಾಗ್ರತಾ ಕ್ರಮ ವಹಿಸಿರಲಿಲ್ಲ ಎಂಬಿತ್ಯಾದಿ ಆರೋಪ ಕೇಳಿಬಂದಿದ್ದವು. ಈ ಎಲ್ಲಾ ಆರೋಪಗಳ ಹಿನ್ನೆಲೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸಮಿತಿಯೊಂದನ್ನು ರಚನೆ ಮಾಡಿ ತನಿಖೆಗೆ ಆದೇಶ ಮಾಡಿದ್ದರು.
ಅದರಂತೆ ಇಂದು ಸ್ಥಳಕ್ಕೆ ಆಗಮಿಸಿದ ತನಿಖಾ ತಂಡ, ಅರ್ಜುನ ಕಾಡಾನೆ ಜೊತೆ ಕಾದಾಡಿದ ಸಂದರ್ಭದ ಬಗ್ಗೆ ವಿವರಣೆ ಪಡೆಯಿತು.
ಡಿ.೪ ರಂದು ಕಾರ್ಯಾಚರಣೆ ಸಂದರ್ಭದಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವಿಚಾರಿಸಿ ಮಾಹಿತಿ ಸಂಗ್ರಹಿಸಿದರು.