ದಲಿತನ ಬೈಕ್ ಗೆ ಬೆಂಕಿಹಚ್ಚಿ ಕಲ್ಲು ತೂರಾಟ; ಹಿಂಸೆಗೆ ತಿರುಗಿದ ಜಮೀನು ಗಲಾಟೆ

ಹಾಸನ : ಜಮೀನು ವಿವಾದದ ಹಿನ್ನೆಲೆಯಲ್ಲಿ ಸರ್ವಣಿಯರು ದಲಿತನ ಮೇಲೆ ಕಲ್ಲು ತೂರಾಟ ನಡೆಸಿ ಬೈಕ್ ಸುಟ್ಟು ಹಾಕಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಬಂಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಂಗಪ್ಪ ಎಂಬವರ ಮೇಲೆ ಕಲ್ಲು ತೂರಾಟ ನಡೆಸಿ ಬೈಕ್ ಗೆ ಬೆಂಕಿಹಚ್ಚಿದ ಆರೋಪಿಗಳಾದ ಮದನ್ ಹಾಗೂ ಮಂಜು ಪರಾರಿಯಾಗಿದ್ದಾರೆ.

ರಂಗಪ್ಪ ಅವರಿಗೆ ಸರ್ಕಾರದಿಂದ ಮಂಜೂರಾಗಿದ್ದ ಭೂಮಿ ತಮಗೆ ಸೇರಿದ್ದು ಎಂದು ಗ್ರಾಮದ ಕೆಲವರು ತಗಾದೆ ತೆಗೆದಿದ್ದರು. ಆದರೆ ರಂಗಪ್ಪ ಅವರು ಭೂಮಿ ಹದ್ದುಬಸ್ತು ಮಾಡಿಸಲು ಶನಿವಾರ ಸರ್ವೇ ಮಾಡಿಸಿದ್ದರು.

ತಮ್ಮ ಜಮೀನಿನ ಗಡಿ ಗುರುತು ಮಾಡಿಸಿ ಜೆಸಿಬಿ ಬಳಸಿ ಹೊಲ ಸಮತಟ್ಟುಗೊಳಿಸುತ್ತಿದ್ದರು. ಆಗ ಸ್ಥಳಕ್ಕೆ ಬಂದು ವಿರೋಧ ವ್ಯಕ್ತಪಡಿಸಿದ ಆರೋಪಿಗಳು ಕಲ್ಲು ತೂರಾಟ ನಡೆಸಿದರು. ಅಲ್ಲದೆ ಜಮೀನಿನ ಬಳಿ ನಿಲ್ಲಿಸಿದ್ದ ರಂಗಪ್ಪ ಅವರ ಬೈಕ್ ಗೆ ಬೆಂಕಿ ಹಚ್ಚಿ ಓಡಿ ಹೋಗಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.