ಚಿಕ್ಕಕೊಂಡಗುಳದಲ್ಲಿ ಓರ್ವನಿಗೆ ಚಾಕು ಇರಿತ; ಆಸ್ತಿಗಾಗಿ ಮಾರಾಮಾರಿ

ಹಾಸನ: ಜಮೀನು ವಿವಾದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದು  ಓರ್ವನಿಗೆ ಚಾಕುವಿನಿಂದ ಇರಿದಿರುವ ಘಟನೆ ಹಾಸನ ಹೊರವಲಯದ ಚಿಕ್ಕಕೊಂಡಗುಳ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.

ರಾಜಶೇಖರ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಯಾಗಿದ್ದು, ಅನಿಲ್ ಚಾಕುವಿನಿಂದ ಹಲ್ಲೆ ಮಾಡಿರುವ ಆರೋಪಿ. ಹಲವು ವರ್ಷಗಳಿಂದ ಎರಡು ಕುಟುಂಬಗಳ ನಡುವೆ ಜಮೀನು ವ್ಯಾಜ್ಯವಿದ್ದು ಆಗಾಗ್ಗೆ ಜಗಳವಾಡುತ್ತಿದ್ದರು ಎನ್ನಲಾಗಿದೆ.

ನಿನ್ನೆ ರಾತ್ರಿ ಇದೇ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳ ಶುರುವಾಗಿದ್ದು ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿ ಅನಿಲ್ ಹಾಗೂ ಸ್ನೇಹಿತರು ರಾಜಶೇಖರನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ರಾಜಶೇಖರ ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ವೇಳೆ ಅನಿಲ್ ಚಾಕುವಿನಿಂದ ರಾಜಶೇಖರಗೆ ಇರಿದಿದ್ದಾನೆ. ಗಾಯಾಳುವಿನ ಸ್ಥಿತಿ ಗಂಭೀರವಾಗಿದ್ದು, ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಂತರ ಅನಿಲ್ ಹಾಗೂ ಸ್ನೇಹಿತರು ಎಸ್ಕೇಪ್ ಆಗಿದ್ದಾರೆ‌. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.