ಕೆರೆಗೆ ಹಾರಿದ ಹೆಂಡತಿ, ನೊಂದ ಗಂಡನೂ ನೀರುಪಾಲು; ಬೆಳ್ಳಂಬೆಳಗ್ಗೆ ದಂಪತಿ ಆತ್ಮಹತ್ಯೆ

ಹಾಸನ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ನಗರದ ಅಡ್ಲಿಮನೆ ಸಮೀಪದ ಚಿಕ್ಕಟ್ಟೆಗೆ ಹಾರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಗರದ ಇಲಾಹಿ ನಗರದ ನಿವಾಸಿಗಳಾದ ರಿಜ್ವಾನ್ (31), ಸಮ್ರಿನ್ ಬಾನು (25) ಆತ್ಮಹತ್ಯೆಗೆ ಶರಣಾದ ದಂಪತಿ.
ಸೋಮವಾರ ಸಂಜೆಯಿಂದಲೂ ಜಗಳವಾಡುತ್ತಿದ್ದ ಗಂಡ-ಹೆಂಡತಿ ವಾಗ್ವಾದ ಕೈ ಮಿಲಾಯಿಸುವ ಹಂತ ತಲುಪಿತ್ತು ಎನ್ನಲಾಗಿದೆ.

ಬೆಳಗ್ಗೆ ಐದು ಗಂಟೆಗೆ ಮನೆಯಿಂದ ಹೊರಟ ಸಮ್ರಿನ್ ಅವರನ್ನು ಹಿಂಬಾಲಿಸಿದ ರಿಜ್ವಾನ್ ಕೆರೆ ತಲುಪುವ ಮುಂಚೆಯೇ ಪತ್ನಿ ಕೆರೆಗೆ ಹಾರಿದ್ದರು. ಇದರಿಂದ ಆತಂಕಗೊಂಡ ಅವರೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೆನ್ಷನ್ ಮೊಹಲ್ಲಾ ಠಾಣೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ನೆರವಿನಿಂದ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.