ಕಾಂಗ್ರೆಸ್ ಸರ್ಕಾರ ಕಮ್ಯುನಲ್ ಗೌರ್ನಮೆಂಟ್ ಆಗಿ ಬದಲಾಗಿದೆ: ಸಿ.ಟಿ.ರವಿ ವಾಗ್ದಾಳಿ

ಕಾಂಗ್ರೆಸ್ ನೀತಿ ಗೃಹ ಸಚಿವರನ್ನು ದುರ್ಬಲರನ್ನಾಗಿಸಿದೆಯೋ? ದುರ್ಬಲತೆ ಅವರನ್ನು ಆವರಿಸಿದೆಯೋ ಗೊತ್ತಿಲ್ಲ

ಚಿಕ್ಕಮಗಳೂರು : ರಾಜ್ಯದಲ್ಲಿ ಈ ಸರ್ಕಾರ ಕಮ್ಯುನಲ್ ಗೌರ್ನಮೆಂಟ್ ಆಗಿ ಬದಲಾಗಿದೆ. ಜನಸಾಮಾನ್ಯರ ಬದಲು ಗೂಂಡಾಗಳು ನಿರ್ಭಯರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಅರಾಜಕತೆ, ಗೂಂಡಾಗಿರಿ, ಹತ್ಯೆ ಕಣ್ಣಿಗೆ ಕಾಣ್ತಿದೆ. ಸರ್ಕಾರ ಮತೀಯ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿದೆ. ಯಾವನೋ ಒಂದಷ್ಟು ಜನ ಯಾವುದೇ ಅನುಮತಿ ಇಲ್ಲದೇ ರಸ್ತೆಯಲ್ಲಿ ನಮಾಜ್ ಮಾಡುತ್ತಾರೆ. ನಮಾಜ್ ಮಾಡೋಕೆ ಮಸೀದೆ ಇದೆ, ಪೊಲೀಸರು ಸೂಮೋಟೋ ಕೇಸ್ ಹಾಕಿದರೆ ಅವರನ್ನೇ ಕಡ್ಡಾಯ ರಜೆ ಮೇಲೆ ಕಳಿಸುತ್ತಾರೆ.

ರಾಜ್ಯದಲ್ಲಿ ಪೊಲೀಸರ ನೈತಿಕತೆ, ಆತ್ಮಸ್ಥೈರ್ಯವನ್ನ‌ ಕುಗ್ಗಿಸುವ ಕೆಲಸವಾಗುತ್ತಿದೆ. ಸರ್ಕಾರ ಆರೋಪಿಗಳ ಮೇಲಿನ ಎಲ್ಲಾ ಕೇಸ್ ಗಳನ್ನ ವಾಪಸ್ ತೆಗೆದುಕೊಳ್ಳುತ್ತದೆ ಎಂದು ಕಿಡಿಕಾರಿದರು.

ಸರ್ಕಾರ ನೀವು ಬೇಕಾದ್ದು ಮಾಡಿ ನಿಮ್ಮ ಜತೆ ನಾವಿದ್ದೇವೆ ಎಂಬ ಸಂದೇಶ ಕೊಟ್ಟಿದೆ. ಈ ಸರ್ಕಾರ ಜನರ ನೆಮ್ಮದಿಗೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ನೀತಿ ಗೃಹ ಸಚಿವರನ್ನು ದುರ್ಬಲರನ್ನಾಗಿಸಿದೆಯೋ? ದುರ್ಬಲತೆ ಅವರನ್ನು ಆವರಿಸಿದೆಯೋ ಗೊತ್ತಿಲ್ಲ.

ಸಿಎಂ ರೇಸ್ ನಲ್ಲಿದ್ದವರು ಸಿಎಂ ಆಗದ ಹತಾಶೆಯಿಂದ ತಮ್ಮ ಸ್ಥಾನವನ್ನು ಸರಿಯಾಗಿ ನಿಭಾಯಿಸುತ್ತಿಲ್ಲವೋ ಗೊತ್ತಿಲ್ಲ ರಾಜ್ಯದಲ್ಲಿ ಕಂಡು ಕಾಣದಂತೆ, ಕೇಳಿದರೂ ಕೇಳದಂತಿರುವ ದುರ್ಬಲ ಗೃಹ ಇಲಾಖೆ ಇದೆ ಎಂದು ಜಿ.ಪರಮೇಶ್ವರ್ ಕಾರ್ಯವೈಖರಿಯನ್ನು ಲೇವಡಿ ಮಾಡಿದರು.