ಕಂಬದಿಂದ ಬಿದ್ದು ತುಮಕೂರು ಮೂಲದ ಸೆಸ್ಕ್ ಲೈನ್ ಮ್ಯಾನ್ ಸಾವು

ಹಾಸನದ ಶ್ರೀನಗರ ಬಡಾವಣೆಯಲ್ಲಿ ಘಟನೆ

ಹಾಸನ: ಲೈನ್ ದುರಸ್ತಿಗಾಗಿ ವಿದ್ಯುತ್ ಕಂಬ ಏರುವಾಗ ಆಯತಪ್ಪಿ ಕೆಳಗೆ ಬಿದ್ದು ಪ್ರೋಬೇಷನರಿ ಲೈನ್ ಮ್ಯಾನ್ ಮೃತಪಟ್ಟ ಘಟನೆ ನಗರದ ಶ್ರೀನಗರ ಬಡಾವಣೆಯಲ್ಲಿ ನಡೆದಿದೆ.

ಮೂಲತಃ ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ಹಳ್ಳಿ ತಿಮ್ಲಾಪುರ ಗ್ರಾಮದವರಾದ ಸೆಸ್ಕ್ ನಲ್ಲಿ ಪ್ರೊಬೇಷನರಿ ಅವಧಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಲೈನ್ ಮ್ಯಾನ್  ರಂಗನಾಥ (32) ಸಾವನ್ನಪ್ಪಿದವರು.

ವಿದ್ಯುತ್ ಕಂಬ ಹತ್ತುತ್ತಿದ್ದ ರಂಗನಾಥ ಅವರು ತಲೆ ಸುತ್ತಿದಂತಾದ್ದರಿಂದ ಹಿಡಿತ ತಪ್ಪಿ ಕಂಬದಿಂದ ಕೆಳಗೆ ಜಾರಿ ಚರಂಡಿಗೆ ಬಿದ್ದರು. ಆಗ ಚರಂಡಿಗೆ ಹಾಕಿದ್ದ ಕಲ್ಲಿಗೆ ತಲೆ ಅವರ ಬಡಿದಿದ್ದರಿಂದ ತೀವ್ರವಾಗಿ ಗಾಯಗೊಂಡು ಪ್ರಜ್ಞೆ ಕಳೆದುಕೊಂಡರು.

ಸಹೋದ್ಯೋಗಿಗಳು ತಕ್ಷಣವೇ ಅಚರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರು. ಆದರೆ ಮಾರ್ಗಮಧ್ಯೆ ಅವರು ಮೃತಪಟ್ಟರು.

ರಂಗನಾಥ ಅವರು ಎರಡು ವರ್ಷಗಳಿಂದ ಪ್ರೋಬೇಷನರಿ ಲೈನ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಪತ್ನಿ ವಿಲೇಜ್ ಅಕೌಂಟೆಂಟ್ ಆಗಿದ್ದು, ಏಳು ವರ್ಷಗಳ ಹಿಂದೆ ವಿವಾಹವಾಗಿದ್ದರು.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.