ಹಾಸನ : ಬೇಲೂರು ತಾಲ್ಲೂಕಿನ, ನಂದಗೋಡನಹಳ್ಳಿ ಗ್ರಾಮದ ಸಮೀಪ ಖಾಸಗಿ ಹಾಗೂ ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಮರಗಳನ್ನು ಕಡಿದು ಸಾಗಿಸಲು ಯತ್ನಿಸಿದ ಪ್ರಕರಣದಲ್ಲಿ
ಕರ್ತವ್ಯಲೋಪ ಎಸಗಿದ ನಾಲ್ವರು ಅರಣ್ಯ ಅಧಿಕಾರಿಗಳ ತಲೆದಂಡವಾಗಿದೆ.
ಹಾಸನ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ .ಪ್ರಭುಗೌಡ, ಬೇಲೂರು ವಲಯ ಅರಣ್ಯಾಧಿಕಾರಿ ವಿನಯ್‌ಕುಮಾರ್, ಅರೇಹಳ್ಳಿ ವಲಯದ ಉಪವಲಯಾಧಿಕಾರಿ ಗುರುರಾಜ್ ಹಾಗೂ ಅರಣ್ಯ ಗಸ್ತುಪಾಲಕ ರಘುಕುಮಾರ್ ಅವರನ್ನು ಅಮಾನತುಗೊಳಿಸಿ
ಸರ್ಕಾರದ ಉಪಕಾರ್ಯದರ್ಶಿ ಬಿ. ವೆಂಕಟೇಶಮೂರ್ತಿ ಆದೇಶ ಹೊರಡಿಸಿದ್ದಾರೆ.

ಇಲಾಖೆಯ ವಿಚಾರಣೆಯನ್ನು ಬಾಕಿ ಇರಿಸಿ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿರುವ ಅವರು
ಡಿಎಫ್‌ಓ ಮೋಹನ್‌ಕುಮಾರ್ ವಿರುದ್ಧ ಕ್ರಮವಹಿಸಲು ಸೂಚನೆ ಐಎಫ್ಎಸ್ ನಿಯಮಗಳ ಅನುಸಾರ ಕ್ರಮ ಜರುಗಿಸಲು ಇಲಾಖೆಗೆ ಸೂಚಿಸಿದ್ದಾರೆ.
ನಂದಗೋಡನಹಳ್ಳಿಯಲ್ಲಿ ಅಕ್ರಮವಾಗಿ ಮರಗಳನ್ನು ಕಡಿದು ಸಾಗಿಸಲು ಯತ್ನಿಸುತ್ತಿದ್ದಾಗ ಬೇಲೂರು ತಹಸೀಲ್ದಾರ್ ಮಮತಾ ಅವರು ತೋರಿದ ಸಮಯಪ್ರಜ್ಞೆಯಿಂದ ಪ್ರಕರಣ ಬೆಳಕಿಗೆ ಬಂದಿತ್ತು.
ಈ ಪ್ರಕರಣದಲ್ಲಿ ಸಂಸದ ಪ್ರತಾಪ್‌ಸಿಂಹ ಅವರ ಸಹೋದರ ವಿಕ್ರಂಸಿಂಹ ಅವರ ಹೆಸರು ಕೂಡ ಕೇಳಿ ಬಂದಿತ್ತು.
ಈ ಸಂಬಂಧ ಹಲವರ ವಿರುದ್ಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.