ಜಮೀನಿಗೆ ಹೊರಟಿದ್ದ ರೈತನ ಮೇಲೆರಗಿದ ಕರಡಿ; ಗಂಭೀರ ಗಾಯ

ಹಾಸನ: ಜಮೀನಿಗೆ ತೆರಳುತ್ತಿದ್ದ ರೈತ ಕರಡಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅರಸೀಕೆರೆ ತಾಲ್ಲೂಕಿನ, ಸಿದ್ದರಹಳ್ಳಿ ತಾಂಡ್ಯದಲ್ಲಿ ನಡೆದಿದೆ.

ಮೂರ್ತಿನಾಯ್ಕ (68) ಕರಡಿ ದಾಳಿಯಿಂದ ಗಾಯಗೊಂಡ ರೈತ. ಬೆಳಿಗ್ಗೆ ಜಮೀನಿಗೆ ತೆರಳುತ್ತಿದ್ದ ಅವರ ಮೇಲೆ ಮನೆಯಿಂದ ನೂರು ಮೀಟರ್ ದೂರದಲ್ಲೇ ಕರಡಿ ಮೈಮೇಲೆ ಎರಗಿದೆ.

ಕರಡಿ ದಾಳಿಯಿಂದ ಮೂರ್ತಿನಾಯ್ಕ ಅವರ ತಲೆ, ಮುಖ, ಕೈ, ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರಿಗೆ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಅರಸೀಕೆರೆ ತಾಲ್ಲೂಕಿನಲ್ಲಿ ಕರಡಿ ಹಾವಳಿ ಹೆಚ್ಚಾಗಿದ್ದು ಒಂದು ವಾರದ ಹಿಂದಷ್ಟೇ ಕರಡಿ ದಾಳಿಯಿಂದ ರೈತರೊಬ್ಬರು ಮೃತಪಟ್ಟಿದ್ದರು. ಅದರ ನೆನಪು ಮಾಸುವ ಮುನ್ನವೇ ಕರಡಿ ದಾಳಿ ನಡೆದಿದೆ. ಸುತ್ತಮುತ್ತಲ ಗ್ರಾಮಸ್ಥರು ಕರಡಿ ಭೀತಿಗೆ ಸಿಲುಕಿದ್ದು, ಕರಡಿ ಸೆರೆ, ಸ್ಥಳಾಂತರಕ್ಕೆ ಆಗ್ರಹಿಸಿದ್ದಾರೆ.