ಉರುಳು ಹಾಕಿದ್ದು ಕಾಡುಹಂದಿಗೆ, ಆದರೆ ಸಿಕ್ಕಿಬಿದ್ದಿದ್ದು ಚಿರತೆ!

ಅರಿವಳಿಕೆ ನೀಡಿ ಚಿರತೆ ರಕ್ಷಿಸಿದ ಅರಣ್ಯ ಇಲಾಖೆ

ಹಾಸನ: ಕಾಡುಹಂದಿ ಸೆರೆಗೆಂದು ಕಾಫಿ ತೋಟದ ಬೇಲಿಗೆ ಹಾಕಿದ್ದ ಉರುಳಿಗೆ ಸಿಲುಕಿ ನರಳುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ರಕ್ಷಿಸಿರುವ ಘಟನೆ ಆಲೂರು ತಾಲ್ಲೂಕಿನ, ಸಾಣೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೆಲ ತಿಂಗಳಿನಿಂದ ಸಾಣೇನಹಳ್ಳಿ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡಿದ್ದ ಚಿರತೆ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತ್ತು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಚಿರತೆ ಕಾಟದ ಜತೆಗೆ ಕಾಡುಹಂದಿ ಹಾವಳಿ ಹೆಚ್ಚಾಗಿದ್ದು ಇದರಿಂದ ಬೇಸತ್ತಿದ್ದ ಸ್ಥಳೀಯರು ಕಾಡುಹಂದಿ ಸೆರೆ ಹಿಡಿಯಲು ಉರುಳು ಹಾಕಿದ್ದರು.

ಆದರೆ ಆಹಾರ ಅರಸಿ ಬಂದ ಚಿರತೆ ಉರುಳಿಗೆ ಬಿದ್ದಿದೆ. ಚಿರತೆ ಉರುಳಿಗೆ ಸಿಲುಕಿಕೊಂಡಿರುವ ಬಗ್ಗೆ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿದ್ದಾರೆ.

ಚಿರತೆ ಪ್ರಜ್ಞೆತಪ್ಪಿ ಮಲಗಿದ ನಂತರ ಚಿರತೆಯನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಿದ್ದಾರೆ. ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.