ಅಕ್ರಮ ಸಂಬಂಧಕ್ಕೆ ಅಡ್ಡಿ; ಪ್ರೇಯಸಿ ಪತಿಗೆ ಗಾಂಜಾ ಕೊಟ್ಟು ಜೈಲಿಗೆ ಕಳಿಸಲು ಹುನ್ನಾರ ನಡೆಸಿದ್ದವನೇ ಪೊಲೀಸರ ಅತಿಥಿಯಾದ!

ಹಾಸನ: ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರೇಯಸಿಯ ಪತಿಯನ್ನು ಗಾಂಜಾ ಮಾರಾಟ ಪ್ರಕರಣದಲ್ಲಿ ಜೈಲಿಗೆ ಕಳಿಸಲು ಹುನ್ನಾರ ನಡೆಸಿದ್ದ ವ್ಯಕ್ತಿಯೊಬ್ಬ ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ತಾನೇ ಸಿಕ್ಕಿಬಿದ್ದ ಘಟನೆ ಸಕಲೇಶಪುರ ಪಟ್ಟಣದಲ್ಲಿ ನಿನ್ನೆ ನಡೆದಿದೆ.

ಮೂಡಿಗೆರೆ ಮೂಲದ ಮಹಮ್ಮದ್ ಉಸಾಮ್ ಹಾಗೂ ಆತನ ಮೂವರು ಸಹಚರರು ಬಂಧಿತರಾಗಿದ್ದು, ಅವರಿಂದ 1.36 ಕೆಜಿ ಗಾಂಜಾ ಹಾಗೂ ಕೃತ್ಯಕ್ಕ ಬಳಸಿದ ಒಂದು ಮಹೀಂದ್ರ ಥಾರ್ ವಾಹನ ವಶಕ್ಕೆ ಪಡೆಯಲಾಗಿದೆ.

ಮಹಮ್ಮದ್ ಉಸಾಮ್, ಅಸ್ಸಾಂ ಮೂಲದ ಕೂಲಿ ಕಾರ್ಮಿಕ ಮುಕ್ತಾರ್ ಅಲಿ ಎಂಬಾತನ ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಈ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಮುಕ್ತಾರ್ ಅಲಿಯನ್ನು ಗಾಂಜಾ ಮಾರಾಟ ಮಾಡುವ ಕೇಸ್ ನಲ್ಲಿ ಸಿಕ್ಕಿಸಬೇಕು ಎಂಬ ದುರುದ್ದೇಶದಿಂದ, ಮಹಮ್ಮದ್ ತನ್ನ ಮೂವರು ಸಹಚರರೊಂದಿಗೆ ಸೇರಿ, 1.36 ಕೆಜಿ ಗಾಂಜಾವನ್ನು ಮುಕ್ತಾರ್ ಅಲಿಗೆ ಕೊಟ್ಟು ನಂತರ ಪೊಲೀಸರಿಗರ ಮಾಹಿತಿ ನೀಡಿ ಆತನ ಬಂಧನವಾಗುವಂತೆ ನೋಡಿಕೊಳ್ಳುವ ಬಲೆ ಹೆಣೆದಿದ್ದರು.

ಆದರೆ ಚಿಕ್ಕಮಗಳೂರು ನೋಂದಣಿಯ ಥಾರ್ ವಾಹನದ ಶಂಕಾಸ್ಪದ ಓಡಾಟ ಗಮನಿಸಿದ ಪೊಲೀಸರು ವಾಹನ ತಪಾಸಣೆಗೆ ಒಳಪಡಿಸಿದಾಗ 1.36 ಕೆಜಿ ಗಾಂಜಾ ಪತ್ತೆಯಾಯಿತು. ನಾಲ್ವರನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಅಮಾಯಕನನ್ನು ಗಾಂಜಾ ಕೇಸ್ ನಲ್ಲಿ ಸಿಲುಕಿಸುವ ಸಂಚು ಬಯಲಾಗಿದೆ.

ಪೊಲೀಸರು ನಾಲ್ವರನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಸಕಲೇಶಪುರ ಸರ್ಕಲ್ ಇನ್ಸ್‌ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಪೃಥ್ವಿ, ಸಿಬ್ಬಂದಿ ರೇವಣ್ಣ, ಶ್ರೀಧರ ಹಾಗೂ ಚಾಲಕ ರಘು ಭಾಗವಹಿಸಿದ್ದರು.