ವರದಕ್ಷಿಣೆ ತಾರದ ಪತ್ನಿಯನ್ನು ಕೊಲೆಗೈದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪತಿ

ಹಾಸನ: ವರದಕ್ಷಿಣೆ ತರುವಂತೆ ಗರ್ಭಿಣಿ ಪತ್ನಿಗೆ ಕಿರುಕುಳ ನೀಡಿ ಹಲ್ಲೆ ನಡೆಸಿ ಕೊಲೆಗೈದ ಪತಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ, ನೊರನಕ್ಕಿ ಗ್ರಾಮದಲ್ಲಿ ನಡೆದಿದೆ.

ನಯನ (24) ಪತಿಯಿಂದ ಕೊಲೆಯಾದ ಪತ್ನಿ, ಅಯ್ಯಪ್ಪ (31) ಹತ್ಯೆ ಮಾಡಿದ ನಂತರ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೊಡ್ಡೇರಿ ಕಾವಲು ಗ್ರಾಮದ ನಯನಳನ್ನು ನೊರನಕ್ಕಿ ಗ್ರಾಮದ ಅಯ್ಯಪ್ಪನೊಂದಿಗೆ ಮೂರು ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಒಂದು ಗಂಡು ಮಗು ಇತ್ತು, ಈಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ನಯನಗೆ ವರದಕ್ಷಿಣೆ ತರುವಂತೆ ಪತಿ ಪದೇ ಪದೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಈ ಸಂಬಂಧ ನಯನ ಎರಡು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೂ ಬುದ್ದಿ ಕಲಿಯದ ಅಯ್ಯಪ್ಪ ಪತ್ನಿ ಮೇಲೆ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ.

ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.