ಕುಡಿಯುವ ನೀರು ಪೂರೈಸದ ಗ್ರಾಪಂ: ಖಾಲಿ ಕೊಡ ಹಿಡಿದು ನೆಟ್ಟೆಕೆರೆ ಗ್ರಾಮಸ್ಥರ ಪ್ರತಿಭಟನೆ

ಶಾಸಕ ಎಚ್.ಕೆ.ಸುರೇಶ್ ಭರವಸೆ ನಂತರ ಪ್ರತಿಭಟನೆ ಹಿಂಪಡೆದ ಗ್ರಾಮಸ್ಥರು

ಹಾಸನ: ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಖಾಲಿ ಕೊಡ ಹಿಡಿದು ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆ ಬೇಲೂರು ತಾಲ್ಲೂಕಿನ, ನೆಟ್ಟೆಕೆರೆ ಗ್ರಾಮದಲ್ಲಿ ನಡೆದಿದೆ.

ಖಾಲಿ ಕೊಡ ಮುಂದಿರಿಸಿಕೊಂಡು ಘೋಷಣೆ ಕೂಗಿದ ಪ್ರತಿಭಟನಾಕಾರರು ಕುಡಿಯುವ ನೀರು ಪೂರೈಕೆ ಮಾಡದ ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಾರಕ್ಕೆ ಒಮ್ಮೆ ಮಾತ್ರ ನೀರು ಬಿಡಲಾಗುತ್ತಿದ್ದು, ಅದಕ್ಕೂ ಕೆಸರು ತುಂಬುತ್ತಿದೆ. ಈ ಬಗ್ಗೆ ಗ್ರಾ.ಪಂ. ಗಮನಕ್ಕೆ ತಂದರೂ ಯಾರೂ ಇತ್ತ ಗಮನಹರಿಸಿಲ್ಲ ಎಂದು ಆರೋಪಿಸಿದರು.

ಪ್ರತಿಭಟನಾ ಸ್ಥಳದಿಂದಲೇ ಶಾಸಕರಿಗೆ ಕರೆ ಮಾಡಿದ ಗ್ರಾಮಸ್ಥರೊಂದಿಗೆ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್‌, ಕುಡಿಯುವ ನೀರಿನ ಸಮಸ್ಯೆ ಬಗೆಗಿನ ಸಮಸ್ಯೆ ಆಲಿಸಿದರು.

ಕುಡಿಯುವ ನೀರು ಸಮಸ್ಯೆ ಬಗೆಹರಿಸಲು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂಬ ಶಾಸಕರ ಭರವಸೆ ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.