ಕೋಳಿ ತಿನ್ನಲು ಬಂದು ಉರುಳಿಗೆ ಸಿಲುಕಿ ಎಂಟು ತಾಸು ನರಳಿದ ಚಿರತೆ!

ಬೇಲೂರು: ಕೋಳಿ ಹಿಡಿದು ತಿನ್ನಲು ಬಂದ ಚಿರತೆ ಉರುಳಿಗೆ ಸಿಲುಕಿ ಸತತ ಎಂಟು ಗಂಟೆ ಕಾಲ ಪರದಾಡಿ ಜೀವ ಉಳಿಸಿಕೊಂಡು ಪರಾರಿಯಾಗಿರುವ ಘಟನೆ ಬೇಲೂರು ತಾಲ್ಲೂಕು ಹಗರೆ ಸಮೀಪದ ಮಲ್ಲಿಕಾರ್ಜುನಪುರ ಗ್ರಾಮದಲ್ಲಿ ನಡೆದಿದೆ.

ಮಲ್ಲಿಕಾರ್ಜುನಪುರ ಗ್ರಾಮಕ್ಕೆ ಶುಕ್ರವಾರ ರಾತ್ರಿ ಆಹಾರ ಅರಸಿ ಕೋಳಿ ಹಿಡಿದು ತಿನ್ನಲೆಂದು ಚಿರತೆಯೊಂದು ಗ್ರಾಮದ ಚಂದ್ರಯ್ಯ ಎಂಬುವರ ಮನೆಯ ಕೊಟ್ಟಿಗೆ ಸಮೀಪ ಬಂದಿದೆ. ಚಿರತೆ ನೋಡಿದ ಕೋಳಿಗಳು ಹೆದರಿ ಮರವೇರಿದ್ದು, ಚಿರತೆಯು ಸಹ ಕೋಳಿಗಳನ್ನು ಬೇಟೆಯಾಡುವ ಭರದಲ್ಲಿ ಮರಕ್ಕೆ‌ ಹಾರಿದೆ.‌

ಅದೇ ಸಮಯದಲ್ಲಿ ಕೋಳಿ ರಕ್ಷಣೆಗೆಂದು ಇಟ್ಟಿದ್ದ ಉರುಳಿನ ತಂತಿಯಲ್ಲಿ ಬಂಧಿಯಾಗಿ ಅದರ ಮುಂಗಾಲು ಉರುಳಿಗೆ ಸಿಲುಕಿಕೊಂಡಿತು.

ಈ ವೇಳೆ ನಾಯಿಗಳು ಬೊಗಳಿದ್ದರಿಂದ ಜನರು ಹೊರಬಂದು ನೋಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಚಿರತೆ ಸೆರೆಗೆ ಬೋನು ಇಟ್ಟಿದ್ದರು. ಕೊನೆಗೂ ಉರುಳಿನಿಂದ ಬಿಡಿಸಿಕೊಂಡು ಚಿರತೆ ಬೆಳಗಿನ ಜಾವ ಪರಾರಿಯಾಗಿದೆ.