ಬೇಲೂರು: ನೂರು ತೆಂಗಿನ ಮರಗಳನ್ನು ಮುರಿದೆಸೆದ ಕಾಡಾನೆಗಳ ಹಿಂಡು: ರೈತನ ಕಣ್ಣೀರು

ಹಾಸನ: ಬೇಲೂರು ತಾಲ್ಲೂಕಿನ ಮಾಳೇಗೆರೆ ಗ್ರಾಮದಲ್ಲಿ ಇಂದು ಮುಂಜಾನೆ ಕಾಡಾನೆಗಳ ಹಿಂಡು ತೋಟವೊಂದರಲ್ಲಿ ದಾಳಿ ನಡೆಸಿ ನೂರಕ್ಕೂ ಹೆಚ್ಚು ತೆಂಗಿನಮರಗಳನ್ನು ಮುರಿದು ನಾಶಪಡಿಸಿದ ಘಟನೆ ನಡೆದಿದೆ.

ಗ್ರಾಮದ ಗಿರೀಶ್ ಎಂಬ ರೈತ ತಮ್ಮ ಜಮೀನಿನಲ್ಲಿ ಬೆಳೆದಿದ್ದ ತೆಂಗಿನಮರಗಳನ್ನು ಕಳೆದುಕೊಂಡು ಕಣ್ಣೀರಿಟ್ಟಿದ್ದಾರೆ.

40ಕ್ಕೂ ಹೆಚ್ಚು ಕಾಡಾನೆಗಳು ಬೆಳೆದಿರುವ ನೂರಾರು ತೆಂಗಿನಮರಗಳನ್ನು ನಾಶ ಮಾಡಿವೆ. ಈ ಮೊದಲು, ಒಂದು ತಿಂಗಳ ಹಿಂದೆಯೂ ಈ ಪ್ರದೇಶದಲ್ಲಿ ಕಾಡಾನೆಗಳು ದಾಂಧಲೆ ನಡೆಸಿ ಹಲವು ಮರಗಳನ್ನು ಮುರಿದಿದ್ದವು.

ಸ್ಥಳೀಯರು ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ, ಇಟಿಎಫ್ ಸಿಬ್ಬಂದಿ ಸ್ಥಳಕ್ಕೆ ಬರದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿರುವುದಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕಷ್ಟಪಟ್ಟು ಬೆಳೆದ ತೆಂಗಿನಮರಗಳು ಹೀಗೆ ಕಳೆದು ಹೋಗುತ್ತಿದರೆ ರೈತರು ಹೇಗೆ ಬದುಕುವುದು?” ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.