ಮನೆ ದೋಚಲು ಬಂದವರು ಒಡತಿಯ ಕುತ್ತಿಗೆ ಹಿಸುಕಿದರು

ಚನ್ನರಾಯಪಟ್ಟಣ: ಹಾಡಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ದೋಚಲು ಬಂದ ಖದೀಮರು ಕಿರುಚುತ್ತಾ ಪ್ರತಿರೋಧ ತೋರಿದ ಮನೆ ಒಡತಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿರುವ ಘಟನೆ ತಾಲೂಕಿನ ಕತ್ತರಿಘಟ್ಟ ಗ್ರಾಮದಲ್ಲಿ ನಡೆದಿದೆ.

ಜು.8 ರಂದು ಗ್ರಾಮದ ಸುಶೀಲಮ್ಮ ಎಂಬುವರು ಬೆಳಗ್ಗೆ 10 ಗಂಟೆ ಸುಮಾರಿಗೆ ಮನೆಯಲ್ಲಿದ್ದರು. ಈ ವೇಳೆ 35-30 ವರ್ಷದ ಅಪರಿಚಿತ ವ್ಯಕ್ತಿ ಸುಶೀಲಮ್ಮ ಮನೆಯ ಬಳಿ ಬಂದು ಬಾಗಿಲು ತಟ್ಟಿದ. ಮಹಿಳೆ ಬಾಗಿಲು ತೆರೆದಾಗ ಊಪಿನಹಳ್ಳಿ ರಾಜಣ್ಣ ಅವರ ಮನೆ ಎಲ್ಲಿ ಎಂದು ಕೇಳಿದ್ದಾನೆ. ಅದಕ್ಕೆ ನಮ್ಮ ಮನೆಯ ಹಿಂಭಾಗದಲ್ಲಿದೆ ಅವರನ್ನು ಕೇಳಿ ಎಂದು ಸುಶೀಲಮ್ಮ ಹೇಳಿದ್ದಾರೆ.

ತಕ್ಷಣವೇ ಮನೆಯ ಕಾಂಪೌಂಡ್ ಆಚೆಗೆ ನಿಂತಿದ್ದ 4 ಜನರು ಓಡಿ ಬಂದು ಬಾಗಿಲನ್ನು ಜೋರಾಗಿ ತಳ್ಳಿ, ಮನೆಯ ಒಳಗೆ ಸೇರಿಕೊಂಡಿದ್ದಾರೆ. ಇದರಿಂದ ಹೆದರಿದ ಸುಶೀಲಮ್ಮ, ಜೋರಾಗಿ ಕಿರುಚಿಕೊಳ್ಳಲು ಆರಂಭಿಸಿದ್ದಾರೆ. ಇದರಿಂದ ತಮ್ಮ ಕೃತ್ಯ ಬಯಲಾಗಲಿದೆ ಎಂದು ಬೆದರಿದ ಚೋರರು, ಮಹಿಳೆಯನ್ನು ತಳ್ಳಿ, ಕುತ್ತಿಗೆ ಹಿಸುಕಿ, ಪಂಚೆಯಿಂದ ಕುತ್ತಿಗೆ ಸುತ್ತ ಬಿಗಿಯಾಗಿ ಎಳೆದು ಉಸಿರುಗಟ್ಟಿಸಿ ಜೀವ ತೆಗೆಯಲು ಪ್ರಯತ್ನಿಸಿದ್ದಾರೆ.

ಅದೇ ವೇಳೆಗೆ ಮನೆಯ ಬಳಿ ಬಂದ ಸುಶೀಲಮ್ಮ ಅವರ ಭಾವ ದೇವರಾಜೇಗೌಡ ಎಂಬವರು, ಹೊರಗಡೆ ಕಾರಿನಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿಯನ್ನು ಕಂಡು, ನೀನು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ನಾನು ಕಿಕ್ಕೇರಿಯವನು, ಸ್ನೇಹಿತರ ಜತೆ ಸೇರಿ ತೆಂಗಿನ ಕಾಯಿ ಚಿಪ್ಪು ತೆಗೆದುಕೊಳ್ಳಲು ಬಂದಿದ್ದೇವೆ ಎಂದು ಉತ್ತರ ಕೊಟ್ಟಿದ್ದಾನೆ.

ಮಾತ್ರವಲ್ಲ ಈ ಮನೆಯ ಅಮ್ಮ ಕೆಳಗಡೆ ಎಮ್ಮೆ ಕಟ್ಟಲು ಹೋಗಿದ್ದಾರೆ. ನಮ್ಮ ಕಡೆಯ ನಾಲ್ವರು ಅವರನ್ನು ಕರೆಯಲು ಹೋಗಿದ್ದಾರೆ ಎಂದು ಸುಳ್ಳು ಹೇಳಿದ್ದಾನೆ. ಆದರೆ ದೇವರಾಜೇಗೌಡರು ಮನೆಯ ಬಾಗಿಲು ಮುಚ್ಚಿದಂತೆ ಇದ್ದುದನ್ನು ನೋಡಿ ಸುಶೀಲಮ್ಮನನ್ನು ಕರೆದಿದ್ದಾರೆ. ಕೆಳಗಡೆ
ಯಾರೂ ಕಾಣದಿದ್ದಾಗ ವಾಪಸ್ ಮನೆಯ ಹತ್ತಿರ ಬರುತ್ತಿದ್ದನ್ನು ನೋಡಿ, ಕಾರಿನಲ್ಲಿ ಇದ್ದವನ ಸನ್ನೆ ಮೇರೆಗೆ ಎಲ್ಲರೂ ಮನೆಯಿಂದ ಆಚೆಗೆ ಓಡಿ ಬಂದು ಕಾರಿನಲ್ಲಿ ವೇಗವಾಗಿ ಪರಾರಿಯಾಗಿದ್ದಾರೆ.

ಚಿನ್ನಾಭರಣ ಇಟ್ಟಿದ್ದ ಮರದ ಬೀರುವಿನ ಬಾಗಿಲ ಹಿಡಿ ಕಿತ್ತು ಮಂಚದ ಮೇಲೆ ಬೀಸಾಡಿದ್ದರು. ಆದರೆ ಬೀರು ತೆಗೆದು ನೋಡಿದಾಗ ಯಾವುದೇ ಚಿನ್ನಾಭರಣ ಅಥವಾ ವಸ್ತುಗಳಾಗಲಿ ಕಳ್ಳತನ ಆಗಿರಲಿಲ್ಲ.

ನಾಲ್ವರೂ ಮುಸುಕುಧಾರಿಗಳಾಗಿದ್ದು ಒಬ್ಬನ ಕೈಯಲ್ಲಿ ಕಬ್ಬಿಣದ ರಾಡ್ ಇತ್ತು. ಮನೆಯಲ್ಲಿ ಹಣ, ಚಿನ್ನಾಭರಣ ದೋಚಲು ಬಂದವರು ನಾನು ಕಿರುಚಿಕೊಳ್ಳಲು ಆರಂಭಿಸಿದಾಗ ಕೊಲ್ಲಲು ಯತ್ನಿಸಿದರು ಎಂದು ಸುಶೀಲಮ್ಮ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.