ಹಾಸನ : ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರ ಸ್ಥಾನಕ್ಕೆ ನಿಗದಿಯಾಗಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಗ್ರಾಪಂ ಸದಸ್ಯರು ಭಾಗವಹಿಸದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ದಲಿತ ಮಹಿಳೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಘಟನೆ ಸಕಲೇಶಪುರ ತಾಲ್ಲೂಕಿನ, ಹೊಂಗಡಹಳ್ಳ ಗ್ರಾಮದಲ್ಲಿ ನಡೆದಿದೆ.
ಆರು ಮಂದಿ ಗ್ರಾಮ ಪಂಚಾಯತಿ ಸದಸ್ಯರನ್ನು ಹೊಂದಿರುವ ಹೊಂಗಡಹಳ್ಳ ಗ್ರಾಮ ಪಂಚಾಯತಿಯ ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಅಧ್ಯಕ್ಷರ ಸ್ಥಾನ ಎಸ್ಸಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂ ಕೆಟಗರಿಗೆ ಮೀಸಲಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಸದಸ್ಯೆ ವನಜಾಕ್ಷಿ ಮಾತ್ರವೇ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ.
ಆದರೆ ಗುರುವಾರ ಚುನಾವಣೆ ಪ್ರಕ್ರಿಯೆ ಆರಂಭಿಸಿದ ಚುನಾವಣಾಧಿಕಾರಿ ನಾಲ್ವರು ಗ್ರಾಮ ಪಂಚಾಯತಿ ಸದಸ್ಯರು ಗೈರಾದ್ದರಿಂದ ಕೋರಂ ಕೊರತೆ ಎದುರಾಗಿದ್ದನ್ನು ಗಮನಿಸಿ ಅಧ್ಯಕ್ಷೆ ಸ್ಥಾನದ ಘೋಷಣೆಯನ್ನು ಫೆ.12 ಕ್ಕೆ ಮುಂದೂಡಿದರು.
ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾಗುವ ವಿಶ್ವಾಸದಲ್ಲಿ ಬಂದಿದ್ದ ವನಜಾಕ್ಷಿ ನೊಂದು ಗ್ರಾ.ಪಂ.ಕಚೇರಿಯಲ್ಲೇ ಕಣ್ಣೀರಿಟ್ಟರು.
ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಾಚೀಹಳ್ಳಿ ಗ್ರಾಮದ ಕ್ಷೇತ್ರದಿಂದ ಸದಸ್ಯೆಯಾಗಿ ಆಯ್ಕೆಯಾಗಿದ್ದ ವನಜಾಕ್ಷಿ ನಂತರ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು.
ಈ ಹಿಂದೆ ಬೇರೆ ಸದಸ್ಯರು ಅಧ್ಯಕ್ಷರು, ಉಪಾಧ್ಯಕ್ಷರಾಗಿ ಆಯ್ಕೆಯಾಗುವಾಗ ನಾನು ಹಾಜರಿದ್ದು ಮತ ಚಲಾವಣೆ ಮಾಡಿದ್ದೇನೆ. ನಾನು ದಲಿತ ಸಮುದಾಯದ ಮಹಿಳೆ ಎನ್ನುವ ಕಾರಣಕ್ಕೆ ನಾನು ಅಧ್ಯಕ್ಷೆಯಾಗುವುದನ್ನು ಸಹಿಸುತ್ತಿಲ್ಲ. ಹಾಗಾಗಿ ನಾಲ್ವರು ಗ್ರಾ.ಪಂ. ಸದಸ್ಯರು ಗೈರಾಗಿದ್ದಾರೆ ಎಂದು ಕಣ್ಣೀರಿಟ್ಟರು.