ಹಾಸನ: ಸ್ನೇಹಿತರು ಮಾಡಿದ ಕಳ್ಳತನ ಕೃತ್ಯಗಳು ಗೊತ್ತಿದೆ ಎಂಬ ಕಾರಣಕ್ಕಾಗಿ ಯುವಕನೊಬ್ಬ ತನ್ನ ಗೆಳೆಯರಿಂದಲೇ ಕೊಲೆಗೀಡಾದ ಘಟನೆ ಹಾಸನ ತಾಲ್ಲೂಕಿನ, ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಿವಕುಮಾರ್ (34) ಕೊಲೆಯಾದ ಯುವಕ, ಅದೇ ಗ್ರಾಮದ ಶರತ್ ಹಾಗೂ ಪ್ರತಾಪ್ ಹತ್ಯೆ ಮಾಡಿದ ಆರೋಪಿಗಳು.
ಕೊಲೆ ಮಾಡಿದ ನಂತರ ಆರೋಪಿಗಳು ಶವವನ್ನು ಶಿರಾಡಿಘಾಟ್ ರಸ್ತೆಯ ಗುಂಡ್ಯ ಬಳಿಯ ಪ್ರಪಾತಕ್ಕೆ ಬಿಸಾಡಿದ್ದು, ಪೊಲೀಸರು ಶವ ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಆರೋಪಿಗಳು ಕುರಿ ಹಾಗೂ ಹಸು ಕಳವು ಮಾಡಿದ್ದರು. ಈ ಕೃತ್ಯದ ಬಗ್ಗೆ ಅವರ ಸ್ನೇಹಿತ ಶಿವಕುಮಾರ್ ಗೆ ಗೊತ್ತಿತ್ತು. ಆತ ಭವಿಷ್ಯದಲ್ಲಿ ಈ ಬಗ್ಗೆ ಯಾರಿಗಾದರೂ ಹೇಳಿದರೆ ತಾವು ಸಮಸ್ಯೆಗೆ ಸಿಲುಕಬೇಕಾಗುತ್ತದೆ ಎಂದು ಆರೋಪಿಗಳು ಶಾಶ್ವತವಾಗಿ ಆತನ ಬಾಯಿ ಮುಚ್ಚಿಸಲು ನಿರ್ಧರಿಸಿದ್ದರು.
ಹೈದರಾಬಾದ್‌ನಲ್ಲಿ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶಿವಕುಮಾರ್ ನನ್ನು ನಾಲ್ಕು ದಿನಗಳ ಹಿಂದೆ ಗ್ರಾಮಕ್ಕೆ ಕರೆಸಿಕೊಂಡಿದ್ದ ಶರತ್ ಹಾಗೂ ಪ್ರತಾಪ್ ಶುಕ್ರವಾರ ಮಧ್ಯಾಹ್ನ ಆತನನ್ನು ಮನೆಯಿಂದ ಹೊರಗೆ ಕರೆದೊಯ್ದಿದ್ದರು.
ಆತನಿಗೆ ಕಂಠಪೂರ್ತಿ ಕುಡಿಸಿ ನಿತ್ರಾಣಗೊಂಡ ನಂತರ ಆತನ ತಲೆಯ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ದುರುಳರು ಶವವನ್ನು ಗುಂಡ್ಯಾ ಬಳಿ ಎಸೆದಿದ್ದರು. ಈ ಕೃತ್ಯಕ್ಕೆ ಅವರು ದಿಲೀಪ್ ಎಂಬಾತನ ಸಹಾಯ ಪಡೆದಿದ್ದರು. ಆತ ನೀಡಿದ ಸುಳಿವು ಆಧರಿಸಿ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ಬಯಲಿಗೆಳೆದಿದ್ದಾರೆ.