ಹಾಸನ: ಮದ್ಯಪಾನದ ಮತ್ತಿನಲ್ಲಿ ಮೊದಲ ಮಹಡಿಯಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರು ನಾಗರಹಾವು ಕಡಿತಕ್ಕೆ ಬಲಿಯಾಗಿರುವ ಘಟನೆ ಶುಕ್ರವಾರ ರಾತ್ರಿ ನಗರ ಹೊರವಲಯದ ಬೂವನಹಳ್ಳಿಯಲ್ಲಿ ನಡೆದಿದೆ.
ಮೂಲತಃ ಚನ್ನರಾಯಪಟ್ಟಣ ತಾಲೂಕಿನ ನಲ್ಲೂರಿನವರಾದ ಆಟೋ ಚಾಲಕ ಗುರು (40) ಮೃತ ವ್ಯಕ್ತಿ.
ನಗರದಲ್ಲಿ ಆಟೋ ಚಾಲಕರಾಗಿ ವೃತ್ತಿ ಮಾಡುತ್ತಿದ್ದ ಅವರು ಶುಕ್ರವಾರ ರಾತ್ರಿ ಮದ್ಯಪಾನ ಮಾಡಿ ಬಂದು ಮನೆಯವರೊಂದಿಗೆ ಊಟ ಮಾಡಿ ಪ್ರತ್ಯೇಕ ಕೊಠಡಿಯಲ್ಲಿ ಮಲಗಿದ್ದರು. ಇನ್ನೊಂದು ಕೋಣೆಯಲ್ಲಿ ಅವರ ಪತ್ನಿ ಶ್ರುತಿ ಹಾಗೂ ಇಬ್ಬರು ಮಕ್ಕಳು ಮಲಗಿದ್ದರು.
ಮನೆಯೊಳಗೆ ಸೇರಿಕೊಂಡಿದ್ದ ನಾಗರಹಾವು ಹಾಸಿಗೆಯಲ್ಲಿ ಸೇರಿಕೊಂಡಿರುವುದನ್ನು ಗಮನಿಸಿದ ಗುರು ಅದರ ಮೇಲೆಯೇ ಹೊರಳಾಡಿದ್ದು ಹಾವು ಅವರ ಕೈಗೆ ಕಚ್ಚಿದೆ. ಮದ್ಯದ ಮತ್ತಿನಲ್ಲಿದ್ದ ಅವರು ಅದನ್ನು ಗಮನಿಸಿಲ್ಲ ಎನ್ನಲಾಗಿದೆ. ಅವರು ಹಾವಿನ ಮೇಲೇ ಹೊರಳಾಡಿರುವುದರ ಕುರುಹಾಗಿ ಅವರ ಕುತ್ತಿಗೆ ಭಾಗಕ್ಕೆ ಹಾವಿನ ಚರ್ಮ ಅಂಟಿಕೊಂಡಿತ್ತು.
ಇದರ ಅರಿವಿಲ್ಲದ ಗುರು ಅವರ ಪತ್ನಿ ಬೆಳಗ್ಗೆ ಪತಿ ಮಲಗಿದ್ದ ಕೊಠಡಿ ಬಾಗಿಲು ತೆರೆದಾಗ ಹೆಡೆಬಿಚ್ಚಿದ್ದ ನಾಗರ ಹಾವಿನ ದರ್ಶನವಾಗಿದೆ. ಅಲ್ಲದೇ ನಿಸ್ತೇಜವಾಗಿ ಬಿದ್ದಿದ್ದ ಪತಿ ಕಣ್ಣಿಗೆ ಬಿದ್ದಿದ್ದಾರೆ.
ತಕ್ಷಣ ಕೊಠಡಿ ಬಾಗಿಲು ಹಾಕಿದ ಅವರು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಸ್ಥಳೀಯರ ಸಹಕಾರದಿಂದ ಹಾವನ್ನು ಹಿಡಿದ ಉರಗ ರಕ್ಷಕರೊಬ್ಬರು ಅದನ್ನು ಚೀಲದಲ್ಲಿ ಬಂಧಿಸಿಟ್ಟರು. ಗುರು ಅವರನ್ನು ಪರೀಕ್ಷಿಸಿದಾಗ ಅವರ ಪ್ರಾಣಪಕ್ಷಿ ಹಾರಿ ಹೋಗಿ ಬಹಳ ಸಮಯವಾಗಿತ್ತು.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.