ಹಾಸನ: ಮನೆ ಕಳವಿಗೆ ಯತ್ನಿಸುವಾಗ ತಪ್ಪಿಸಿಕೊಳ್ಳುವ ಆತುರದಲ್ಲಿ ಛಾವಣಿಯಿಂದ ಜಾರಿ ಬಿದ್ದ ಕಳ್ಳನೊಬ್ಬ ಆಸ್ಪತ್ರೆ ಸೇರಿದ ಘಟನೆ ನಗರದ ಬಿ.ಕಾಟೀಹಳ್ಳಿಯಲ್ಲಿ ನಡೆದಿದೆ.
ಹಾಸನ ತಾಲ್ಲೂಕಿನ ಹೊಸೂರು ಗ್ರಾಮದ ಯೋಗೇಶ ಗಾಯಗೊಂಡು ಪೊಲೀಸರಿಗೆ ಸಿಕ್ಕಿಬಿದ್ದ ಕಳ್ಳ.
ನಗರದ ಬಿ.ಕಾಟೀಹಳ್ಳಿಯ ಮಂಜೇಗೌಡ ಎಂಬವರ ಮನೆಯಲ್ಲಿ ಕಳ್ಳತನ ಮಾಡಲು ಬಂದಿದ್ದ ಚೋರ ಮನೆಯ ಛಾವಣಿತ ಪ್ಲಾಸ್ಟಿಕ್ ಶೀಟ್ ತೆಗೆದು ಒಳ ಬರಲು ಯತ್ನಿಸುತ್ತಿದ್ದ. ಶಬ್ದ ಕೇಳಿ ಹೊರ ಬಂದ ಮನೆಯ ಮಾಲೀಕ ಮಂಜೇಗೌಡ ಕಳ್ಳನನ್ನು ನೋಡಿ ಕೂಗಿಕೊಂಡರು.
ಇದರಿಂದ ಗಾಬರಿಯಾದ ಯೋಗೇಶ ತಪ್ಪಿಸಿಕೊಳ್ಳದ ಪಕ್ಕದ ತಿರುಮಲಕುಮಾರ್ ಎಂಬವರ ಮನೆ ಛಾವಣಿಗೆ ನೆಗೆದಿದ್ದಾನೆ. ಆದರೆ ಆತನ ಲೆಕ್ಕಾಚಾರ ತಪ್ಪಿ ಕಾಲು ಜಾರಿ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ.
ಸ್ಥಳಕ್ಕೆ ಹೋದ ಬಡಾವಣೆ ಠಾಣೆ ಪೊಲೀಸರು ಕಳ್ಳನನ್ನು ಆಂಬ್ಯುಲೆನ್ಸ್‌ನಲ್ಲಿ ಕರೆತಂದು ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿ ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.