ತಮ್ಮನನ್ನೇ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ ಅಣ್ಣ; ಪ್ರಾಣ ಬಲಿ ಪಡೆದ ಆಸ್ತಿ ವಿವಾದ

ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ಘಟನೆ

ಹಾಸನ: ಜಮೀನು ವಿವಾದ ಹಿನ್ನೆಲೆಯಲ್ಲಿ ಅಣ್ಣನೇ ತಮ್ಮನನ್ನು ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಬೇಲೂರು ತಾಲ್ಲೂಕಿನ ಅರೇಹಳ್ಳಿಯಲ್ಲಿ ನಡೆದಿದೆ.

ಅರೇಹಳ್ಳಿ ಗ್ರಾಮದ ಕೇಶವ ನಗರದ ನಿವಾಸಿ ಸಂಗಯ್ಯ (58) ಕೊಲೆಯಾದವರು, ಆತನ ಸಹೋದರ ಈರಯ್ಯ ಹತ್ಯೆ ಆರೋಪಿ.

ಸಹೋದರರ ನಡುವೆ ಪಿತ್ರಾರ್ಜಿತ ಆಸ್ತಿ ಹಂಚಿಕೆ ಸಂಬಂಧ ವಿವಾದವಿತ್ತು. ಇಂದು ಆ ಸಂಬಂಧ ಆರಂಭವಾದ ಜಗಳ ತಾರಕಕ್ಕೇರಿ ಅಣ್ಣ ಮಚ್ಚಿನಿಂದ ತಮ್ಮನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ.

ಇದರಿಂದ ತೀವ್ರವಾಗಿ ಗಾಯಗೊಂಡ ಸಂಗಯ್ಯ ಮೃತಪಟ್ಟರು. ಅರೇಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.