ಎಚ್ಚರಿಕೆ!!: ಹಾಸನ ಜಿಲ್ಲೆಯಲ್ಲಿ ಪ್ರತ್ಯಕ್ಷವಾಯ್ತಾ ಉತ್ತರ ಭಾರತದ ಕುಖ್ಯಾತ ‘ಚಡ್ಡಿ ಬನಿಯನ್ ಗ್ಯಾಂಗ್’?

ಭೀತಿ ಮೂಡಿಸಿದ ಆಗಂತುಕರ ಓಡಾಟ| ಪೊಲೀಸರಿಗೂ ಸವಾಲು ಈ ಗ್ಯಾಂಗ್

ಹಾಸನ: ಉತ್ತರ ಭಾರತ ಮೂಲದ ‘ಚಡ್ಡಿ ಬಿನಿಯನ್ ಗ್ಯಾಂಗ್, ಎಂದೇ ಗುರುತಿಸಿಕೊಳ್ಳುವ ಅಪಾಯಕಾರಿ ದರೋಡೆಕೋರರ ತಂಡ ಜಿಲ್ಲೆಗೆ ಕಾಲಿಟ್ಟಿದೆಯಾ?

ಹೌದು, ಅಂತಹ ಅನುಮಾನಕ್ಕೆ ಆಸ್ಪದ ನೀಡುವ ಕಳವು ಪ್ರಕರಣ ವರದಿಯಾಗಿದೆ ಹಾಗೂ ಒಳ ಉಡುಪಿನಲ್ಲಿ ಓಡಾಡುವ ಮುಸುಕುಧಾರಿ ಆಗಂತುಕರ ಓಡಾಟ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅರಸೀಕೆರೆಯ ಮಾರುತಿ ನಗರದಲ್ಲಿ ಗುರುವಾರ ರಾತ್ರಿ ಚಡ್ಡಿ, ಬನಿಯನ್ ಧರಿಸಿದ, ಮುಖಕ್ಕೆ ಮಾಸ್ಕ್ ಮುಚ್ಚಿಕೊಂಡ, ಮೈಗೆ ಮಣ್ಣು ಬಳಸಿಕೊಂಡು ರಾಡ್ ಹಿಡಿದು ಇಬ್ಬರು ದಢೂತಿಗಳು ರಸ್ತೆಯಲ್ಲಿ ಓಡಾಡುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೇ ಬಡಾವಣೆಯ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, ಚಡ್ಡಿ, ಬನಿಯನ್ ಗ್ಯಾಂಗ್ ಅರಸೀಕೆರೆಯಲ್ಲಿ ಕಾರ್ಯಾಚರಣೆ ಆರಂಭಿಸಿರುವ ಆತಂಕ ಹುಟ್ಟುಹಾಕಿದೆ.

ಅಲ್ಲದೇ ಗುರುವಾರ ರಾತ್ರಿ 2.30ರ ಸಮಯದಲ್ಲಿ ಮಾರುತಿನಗರ ಬಡಾವಣೆಯಲ್ಲಿರುವ ಸರ್ಕಾರಿ ಜ್ಯೂನಿಯರ್ ಕಾಲೇಜು ಉಪನ್ಯಾಸಕ ಜಯಣ್ಣ ಅವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯ ಮಾಲೀಕರು ಕುಟುಂಬ ಸಮೇತ ಬೇರೆ ಊರಿಗೆ ಹೋಗಿದ್ದರು. ಮನೆ ಬಾಗಿಲು ಮುರಿದಿದ್ದು ಮನೆಯಲ್ಲಿ ಏನೇನು ಕಳುವಾಗಿದೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.