ಕಾಡಾನೆಗೆ ರೆಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ಯಶಸ್ವಿ; ಓಲ್ಡ್ ಬೆಲ್ಟ್ ಓಡಾಟಕ್ಕೆ ರೇಡಿಯೋ ಕಾಲರ್ ಅಂಕುಶ!

ಹಾಸನ : ಕಾಡಾನೆಗೆ ರೆಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆಯ ಎರಡನೇ ದಿನವಾದ ಶನಿವಾರ ಅರಣ್ಯ ಇಲಾಖೆ ಶ್ರಮಕ್ಕೆ ಫಲ ದೊರಕಿದೆ.

ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಓಲ್ಡ್ ಬೆಲ್ಟ್ ಗುಂಪಿನ ಹೆಣ್ಣಾನೆಗೆ ರೆಡಿಯೋ ಕಾಲರ್ ಅಳವಡಿಸಲಾಯಿತು.

ಕಾಫಿ ಎಸ್ಟೇಟ್‌ನಲ್ಲಿದ್ದ ಹೆಣ್ಣಾನೆಗೆ ತಜ್ಞರು ಅರವಳಿಕೆ ಚುಚ್ಚುಮದ್ದು ನೀಡಿದರು. ಇದರಿಂದಾಗಿ ಬೆದರಿದ ಆನೆ ಸ್ವಲ್ಪ ದೂರ ಓಡಿ ಹೋಗಿ ನಿಂತಿತು. ಆ ಹೆಣ್ಣಾನೆ ಪಕ್ಕ ಸಾಕಾನೆಗಳನ್ನು ನಿಲ್ಲಿಸಿಕೊಂಡು ಅರಣ್ಯ‌ ಇಲಾಖೆ ಸಿಬ್ಬಂದಿ ರೇಡಿಯೋ ಕಾಲರ್ ಅಳವಡಿಸಿದರು.

ರೆಡಿಯೋ ಕಾಲರ್ ಅಳವಡಿಸಿದ ಆನೆಯ ಆರೋಗ್ಯದ ಮೇಲೆ ಕೆಲಹೊತ್ತು ನಿಗಾವಹಿಸಿದ ನಂತರ ಕಾಫಿ ಎಸ್ಟೇಟ್‌ನಲ್ಲೇ ಬಿಡಲಾಯಿತು.

ಸಾಕಾನೆ ಭೀಮನ ನೇತೃತ್ವದಲ್ಲಿ ನಡೆದ ರೆಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಏಕಲವ್ಯ, ಶ್ರೀರಾಮ, ಲಕ್ಷ್ಮಣ, ಕಂಜನ್, ಈಶ್ವರ ಸಾಕಾನೆಗಳು ಭಾಗಿಯಾಗಿದ್ದವು.