ಬಸ್ ಡಿಕ್ಕಿಯಾಗಿ ಬೈಕ್ ಸವಾರಿಬ್ಬರ ಸಾವು; ರಸ್ತೆಯಲ್ಲೇ ಹೊತ್ತಿ ಉರಿಯಿತು ಕೆ.ಎಸ್.ಆರ್.ಟಿ.ಸಿ. ಬಸ್!

ಹಾಸನ: ಬೈಕ್ ಹಾಗೂ ಸಾರಿಗೆ ಬಸ್ ನಡುವಿನ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಡಿಕ್ಕಿ ರಭಸಕ್ಕೆ ಇಂಧನ ಟ್ಯಾಂಕ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಬಸ್ ಹೊತ್ತಿ ಉರಿದ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ, ಬೇಡಿಗನಹಳ್ಳಿ ಸರ್ಕಲ್ ಬಳಿ ನಡೆದಿದೆ.

ತಿಪಟೂರು ತಾಲ್ಲೂಕಿನ, ಬಿದರೆಕೆರೆ ಗ್ರಾಮದ ರೇಣುಕಪ್ಪ ಮತ್ತು ಇದೇ ಗ್ರಾಮದ ರವೀಶ ಮೃತ ದುರ್ದೈವಿಗಳು

ಬೆಂಗಳೂರು ಕಡೆಯಿಂದ ಬರುತ್ತಿದ್ದ ಚಿಕ್ಕಮಗಳೂರು ಘಟಕದ ಸಾರಿಗೆ ಬಸ್ ಮುಂದೆ‌ ಹೋಗುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್‌ನಲ್ಲಿದ್ದವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.

ಅಪಘಾತದ ನಂತರ ಬಸ್‌ಗೆ ಬೆಂಕಿ ಹೊತ್ತಿಕೊಂಡಿತು. ಕೂಡಲೇ ರಸ್ತೆಯಲ್ಲೇ ಬಸ್ ನಿಲ್ಲಿಸಿದ ಚಾಲಕ ಪ್ರಯಾಣಿಕರನ್ನು ತುರ್ತಾಗಿ ಕೆಳಗಿಳಿಸಿದರು. ನೋಡು ನೋಡುತ್ತಲೇ ಬಸ್ ರಸ್ತೆಯಲ್ಲೇ ಹೊತ್ತಿ ಉರಿಯಿತು.

ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು.

ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.