ಹಾಸನ, ಮೇ 29, 2025: ಕಳೆದ ವಾರವಷ್ಟೇ ಜಿಲ್ಲೆಯ ಇಬ್ಬರು ಹದಿಹರೆಯದವರು ಹೃದಯಾಘಾತಕ್ಕೆ ಬಲಿಯಾಗಿದ್ದ ಘಟನೆ ಜನಮಾನಸದಿಂದ ಮಾಸುವ ಮುನ್ನವೇ ಪದವಿ ವಿದ್ಯಾರ್ಥಿನಿಯೊಬ್ಬರು ಹಾರ್ಟ್ ಅಟ್ಯಾಕ್ ನಿಂದ ಮೃತ ಪಟ್ಟಿರುವುದು ಆತಂಕ ಮೂಡಿಸಿದೆ.
ಹಾಸನ ತಾಲೂಕಿನ ಕೆಲವತ್ತಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದ ದಾರುಣ ಘಟನೆಯೊಂದರಲ್ಲಿ ಅಂತಿಮ ವರ್ಷದ ಬಿ.ಕಾಂ. ವಿದ್ಯಾರ್ಥಿನಿ ಕವನ.ಕೆ.ವಿ. (21) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕೆಲವತ್ತಿ ಗ್ರಾಮದ ಪಾಪಣ್ಣ ಮತ್ತು ಗಾಯತ್ರಿ ದಂಪತಿಯ ಪುತ್ರಿಯಾಗಿರುವ ಕವನ, ಹಾಸನ ನಗರದ ಎಂ.ಜಿ. ರಸ್ತೆಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು.
ಕವನ ತನ್ನ ಪದವಿ ಪರೀಕ್ಷೆಯ ಮೂರು ವಿಷಯಗಳನ್ನು ಈಗಾಗಲೇ ಬರೆದಿದ್ದು, ಇನ್ನೂ ಮೂರು ವಿಷಯಗಳ ಪರೀಕ್ಷೆ ಬಾಕಿಯಿತ್ತು. ನಾಳೆ (ಮೇ 30) ನಾಲ್ಕನೇ ವಿಷಯದ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಆದರೆ, ಸಂಜೆ ಮನೆಗೆ ನೀರು ತರುತ್ತಿದ್ದ ವೇಳೆ ದಿಢೀರ್ ಎದೆನೋವು ಕಾಣಿಸಿಕೊಂಡಿತು. ತಾಯಿಯ ಬಳಿ ಕುಡಿಯಲು ನೀರು ಕೇಳಿದ ಕವನ, ತಾಯಿ ನೀರು ತಂದು ಕೊಡುವ ಮುಂಚೆಯೇ ಮನೆಯಲ್ಲಿಯೇ ಕುಸಿದು ಬಿದ್ದರು.
ಕೂಡಲೇ ಪೋಷಕರು ಕವನಳನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಕರೆತಂದರಾದರೂ, ಅಷ್ಟರಲ್ಲಿ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಈ ಘಟನೆಯಿಂದ ಕವನ ಅವರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸಹಪಾಠಿಗಳು ಹಾಗೂ ಕಾಲೇಜಿನ ಉಪನ್ಯಾಸಕ ವರ್ಗದಲ್ಲಿ ಶೋಕದ ಛಾಯೆ ಆವರಿಸಿದೆ.
ಕವನ ಅವರ ಅಕಾಲಿಕ ನಿಧನದಿಂದ ಕೆಲವತ್ತಿ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಮತ್ತು ಕಾಲೇಜು ಸಿಬ್ಬಂದಿ ಶೋಕ ವ್ಯಕ್ತಪಡಿಸಿದ್ದಾರೆ.