ಹಾಸನ: ಎರಡು ಕಾರುಗಳು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಸಾವಿಗೀಡಾಗಿ ಐದು ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ವ್ಯಾಪ್ತಿಯ ಕೆಂಪುಹೊಳೆ ಬಳಿ ನಡೆದಿದೆ.
ಓರ್ವನ ಸ್ಥಿತಿ ಗಂಭೀರವಾಗಿದ್ದು ಅವರನ್ನು ಮಂಗಳೂರಿಗೆ ರವಾನಿಸಲಾಗಿದೆ. ಉಳಿದ ಗಾಯಾಳುಗಳೆಲ್ಲರನ್ನೂ ಸಕಲೇಶಪುರದ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ವ್ಯಕ್ತಿ ಬೆಂಗಳೂರಿನವರು ಎನ್ನಲಾಗಿದೆ. ಉಳಿದವರ ಗುರುತು ಪತ್ತೆಯಾಗಬೇಕಿದೆ.
ಧರ್ಮಸ್ಥಳದಿಂದ-ಬೆಂಗಳೂರು ಕಡೆಗೆ ಬರುತ್ತಿದ್ದ ಕಾರುಗಳು ಒಂದನ್ನೊಂದು ಹಿಂದಿಕ್ಕುತ್ತಿದ್ದಾಗ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸರಕು ತುಂಬಿದ ಲಾರಿಗೆ ಕೆಂಪುಹೊಳೆ ತಿರುವಿನಲ್ಲಿ ಡಿಕ್ಕಿ ಸಂಭವಿಸಿದೆ. ಲಾರಿ ಪ್ರಪಾತಕ್ಕೆ ಬೀಳುವುದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.