ಶಿರಾಡಿ ಘಾಟ್ ನಲ್ಲಿ ಇನ್ನೋವಾ-ಕಂಟೈನರ್ ಲಾರಿ ಮುಖಾಮುಖಿ ಡಿಕ್ಕಿ; ತಾಯಿ-ಮಗ ಸ್ಥಳದಲ್ಲೇ ಸಾವು

ಮೃತರು ಬಂಟ್ವಾಳ ಮೂಲದವರು| ಕಂಟೈನರ್ ಡಿಕ್ಕಿಯಿಂದ ನುಜ್ಜುಗುಜ್ಜಾದ ಇನ್ನೋವಾ

ಹಾಸನ : ಇನೋವಾ ಕಾರು ಹಾಗೂ ಕಂಟೇನರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗ‌ಂಭೀರವಾಗಿ ಗಾಯಗೊಂಡ ದಾರುಣ ಘಟನೆ ಸಕಲೇಶಪುರ ತಾಲ್ಲೂಕಿನ, ರಾಷ್ಟ್ರೀಯ ಹೆದ್ದಾರಿ 75ರ ಕೆಂಪುಹೊಳೆ ಸಮೀಪ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು ಮೂಲದ
ಶಫೀಕ್ (20), ಸಫಿಯಾ (50) ಮೃತ ದುರ್ದೈವಿಗಳು‌. ಇನೋವಾ ಕಾರಿನಲ್ಲಿದ್ದ ಉಳಿದ ನಾಲ್ವರು ಗಾಯಾಳುಗಳನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ರವಾನಿಸಲಾಗಿದೆ.

ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ KA-19-AE-3770 ನಂಬರ್‌ನ ಕಂಟೇನರ್ ಲಾರಿಗೆ
ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ KA-19-MD-3086 ಇನೋವಾ ಕಾರು ಮುಖಾಮುಖಿ ಡಿಕ್ಕಿಯಾದ್ದರಿಂದ ದುರ್ಘಟನೆ ಸಂಭವಿಸಿದೆ. ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.