ಮುಂದಿನ 100 ದಿನಗಳಲ್ಲಿ ಎದುರಾಳಿಗಳು ನಮ್ಮನ್ನು ರಾಜಕೀಯವಾಗಿ ಮುಗಿಸುತ್ತಾರೆ; ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ ಎಚ್.ಡಿ.ದೇವೇಗೌಡ

ಪ್ರಧಾನಿ ಮೋದಿಯವರು ಮತ್ತು ನನ್ನದು ಯಾವುದೋ ಜನ್ಮಾಂತರದ ಸಂಬಂಧ, ನನ್ನ ಬಗ್ಗೆ ತುಂಬಾ ಗೌರವ ಇಟ್ಟು ಕೊಂಡಿದ್ದಾರೆ.

ಹಾಸನ: ಪ್ರಜ್ವಲ್ ರೇವಣ್ಣ ಮಾಡಿರುವ ಕೆಲಸ ಜನರಿಗೆ ಮುಟ್ಟಿಸುವಲ್ಲಿ ನಾವು ಹಿಂದೆ ಬಿದ್ದರೆ ಮುಂದಿನ 100 ದಿನಗಳಲ್ಲಿ ಎದುರಾಳಿಗಳು ನಮ್ಮನ್ನು ರಾಜಕೀಯವಾಗಿ ಮುಗಿಸುತ್ತಾರೆ. ಆದ್ದರಿಂದ ನೂರು ದಿನಗಳು ಎದುರಾಳಿಗಳು ಮಾಡುವ ಎಲ್ಲ ದಾಳಿಗಳನ್ನೂ ಎದುರಿಸಿ ಹೋರಾಟ ಮಾಡುತ್ತೇವೆ ಎಂಬ ಸಂಕಲ್ಪ ಮಾಡಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಜೆಡಿಎಸ್‌ ಕಾರ್ಯಕರ್ತರಿಗೆ ಕರೆ ನೀಡಿದರು.

ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅಭಿವೃದ್ಧಿ ಕಾರ್ಯಗಳ ಮಾಹಿತಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ನಮ್ಮಲ್ಲಿ ಸಮಸ್ಯೆಗಳು ಬಹಳ ಇದೆ, ಮಾಡಬೇಕಾದ್ದು ಕೂಡ ಸಾಕಷ್ಟು ಇದೆ. ಆದರೂ ಪ್ರಜ್ವಲ್ ಶಕ್ತಿಮೀರಿ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಮೇಲೆ ಗಧಾ ಪ್ರಹಾರ ಮಾಡುತ್ತಿದ್ದಾರೆ. ವಾರದ ಹಿಂದೆ ಅರಸೀಕೆರೆ, ಹಾಸನದಲ್ಲಿ ಸಭೆ ಮಾಡಿದ್ದಾರೆ. ಹಾಸನದ ಮೆಡಿಕಲ್ ಕಾಲೇಜು ನೂತನ ಕಟ್ಟಡ ಉದ್ಘಾಟನೆ ಮಾಡಿದ್ದಾರೆ. ಆದರೆ ಈ ಕಾಲೇಜು ಆಗಿದ್ದು ಯಾವಾಗ? ಮೆಡಿಕಲ್ ಕಾಲೇಜು ಉಳಿಸಲು ರೇವಣ್ಣ ಮಾಡಿದ ಪ್ರಯತ್ನ ಗೊತ್ತಿದೆಯಾ? ಎಂದು ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ನಮ್ಮ ಅವಧಿಯಲ್ಲಿ ಆದ ಕೆಲಸಗಳನ್ನು ಈಗ ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇಷ್ಟೆಲ್ಲಾ‌ ಕೆಲಸ ಮಾಡಿರುವ ಸಂಸದರನ್ನು ಸೋಲಿಸಲೇಬೇಕು ಎಂದು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿಯವರು ಮತ್ತು ನನ್ನದು ಯಾವುದೋ ಜನ್ಮಾಂತರದ ಸಂಬಂಧ, ನನ್ನ ಬಗ್ಗೆ ತುಂಬಾ ಗೌರವ ಇಟ್ಟು ಕೊಂಡಿದ್ದಾರೆ. ಆದರೆ ಕಾಂಗ್ರೆಸ್ ನನ್ನನ್ನು ಅಧಿಕಾರದಿಂದ ಕಿತ್ತು ಹಾಕಿತು. ಈ ದೇವೇಗೌಡ ಒಂದೇ ಒಂದು ರೂಪಾಯಿ ದುರುಪಯೋಗ ಮಾಡಿಲ್ಲ, ಇಡೀ ಹಿಂದುಸ್ತಾನದಲ್ಲಿ ನನ್ನ ಬಗ್ಗೆ ಯಾರೂ ಆರೋಪ ಮಾಡಲ್ಲ. ನಾನು ಪ್ರಧಾನಿಯಾಗಿ ದೇಶದ ಹಲವಾರು ಸಮಸ್ಯೆ ಬಗೆಹರಿಸಿದ್ದೇನೆ. ಆ ಬಗ್ಗೆ ಅರಿಯಲು ನನ್ನ ನೇಗಿಲಗೆರೆ ಪುಸ್ತಕ ಓದಬೇಕು ಎಂದರು.

ನನಗೆ ಇನ್ನೂ ಎರಡು ವರ್ಷ ರಾಜ್ಯಸಭೆ ಅವಧಿ ಇದೆ, ನಾನು ಪ್ರಜ್ವಲ್ ಹಿಂದೆ ನಿಲ್ಲುತ್ತೇನೆ. ಅವರ ದುಡಿಯುತ್ತಾರೆ, ನನಗೆ ಓಡಾಟ ಆಗಲ್ಲ. ಹೀಗಾಗಿ ಅವರಿಗೆ ಸಲಹೆ ಕೊಡುತ್ತೇನೆ. ಜಿಲ್ಲೆಯ ಜನತೆಯ ಋಣ ತೀರಿಸೋಣ ಎಂದು ಹೇಳಿದರು.

ಕುಮಾರಸ್ವಾಮಿ ಅವರು 26 ಸಾವಿರ ಕೋಟಿ ಸಾಲ‌ಮನ್ನಾ ಮಾಡಿದ್ರಲ್ಲ, ಅದಕ್ಕಾಗಿ ಅಸೂಯೆ ಪಡ್ತೀರಾ ಸಿದ್ದರಾಮಯ್ಯ ಅವರೇ? ನಿಮ್ಮ ಎಲ್ಲಾ ಭಾಗ್ಯಗಳು ಏನಿದೆ ಎಲ್ಲ ಭಾಗ್ಯಗಳಿಗೂ ಕುಮಾರಸ್ವಾಮಿ ಅವರು ಹಣ ಒದಗಿಸಿದರು. ರೈತರ ಸಾಲಮನ್ನಾ ಮಾಡೊದಾದ್ರೆ ನನ್ನ ಭಾಗ್ಯಗಳಿಗೆ ಹಣ ಇಟ್ಟು ಆಮೇಲೆ‌ ಮಾಡಿ ಎಂದು ಸಿದ್ದರಾಮಯ್ಯ ಹೇಳಿದ್ದರು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯ ವಿಚಾರ ಪ್ರಸ್ತಾಪ ಮಾಡಿ ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.