ಮುಡಾ ನಿವೇಶನ: ನಾವೂ ರಾಜಕೀಯವಾಗಿಯೇ ಮುಂದುವರಿಯಬೇಕಾಗುತ್ತದೆ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ

ನಾವು ಕಾನೂನಾತ್ಮಕವಾಗಿದ್ದೇವೆ. ಕಾನೂನಿಗೆ ವಿರುದ್ಧವಾಗಿ ಆಗಿರುವುದೆಲ್ಲಿ ಎನ್ನುವುದನ್ನು ಬಿಜೆಪಿಯವರು ತೋರಿಸಲಿ

ಮೈಸೂರು: ನನ್ನ ಪತ್ನಿಗೆ ಬದಲಿ ನಿವೇಶನ ಕೊಟ್ಟ ವಿಷಯದಲ್ಲಿ ಬಿಜೆಪಿಯವರು ರಾಜಕೀಯವನ್ನು ಮುಂದುವರಿಸಿದರೆ ನಾವೂ ರಾಜಕೀಯವಾಗಿಯೇ ಮುಂದುವರಿಯಬೇಕಾಗುತ್ತದೆ. ಅವರಿಗೆ ಹೇಗೆ ಎದಿರೇಟು ಕೊಡಬೇಕು ಎನ್ನುವುದು ಗೊತ್ತಿದೆ’ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಕಾನೂನಾತ್ಮಕವಾಗಿದ್ದೇವೆ. ಕಾನೂನಿಗೆ ವಿರುದ್ಧವಾಗಿ ಆಗಿರುವುದೆಲ್ಲಿ ಎನ್ನುವುದನ್ನು ಬಿಜೆಪಿಯವರು ತೋರಿಸಲಿ’ ಎಂದು ಸವಾಲು ಹಾಕಿದರು.

‘ಮುಡಾ ಹಗರಣದ ಬಗ್ಗೆ ಇಬ್ಬರು ಐಎಎಸ್ ಅಧಿಕಾರಿಗಳ ನೇತೃತ್ವದ ಸಮಿತಿಯಿಂದ ತನಿಖೆ ನಡೆಯುತ್ತಿದೆ. ವರದಿ ಬಂದ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇನೆ. ನಮ್ಮ ಕಾಲದಲ್ಲೂ ತಪ್ಪುಗಳು ಆಗಿವೆ. ಬಿಜೆಪಿ ಕಾಲದಲ್ಲೇ ಹೆಚ್ಚು ತಪ್ಪುಗಳಾಗಿವೆ. ಶೇ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ವಿಷಯವನ್ನು ಆಯುಕ್ತರಾದಿಯಾಗಿ ಯಾರೂ ದುರುಪಯೋಗ ಮಾಡಿಕೊಳ್ಳದಂತೆ ಸರಿಪಡಿಸುತ್ತೇವೆ’ ಎಂದು ತಿಳಿಸಿದರು.

2021ರಲ್ಲಿ ಬಿಜೆಪಿ ಸರ್ಕಾರವೇ ಇತ್ತಲ್ಲ. ಆ ಕಾಲದಲ್ಲಿ ಕೊಟ್ಟರೆ, ಮುಡಾದವರು ಆಗ ತಪ್ಪು ಮಾಡಿದ್ದರೆ ಜವಾಬ್ದಾರರು ಯಾರು?’ ಎಂದು ಕೇಳಿದರು.

‘ಒಂದು ವೇಳೆ ನಿವೇಶನ ವಾಪಸ್ ಪಡೆದುಕೊಳ್ಳುವುದೇ ಆದಲ್ಲಿ ಭೂಸ್ವಾಧೀನ ಕಾಯ್ದೆ ಪ್ರಕಾರ ನಮಗೆ ಪರಿಹಾರ ಕೊಡಬೇಕಲ್ಲವೇ? ಜಮೀನಿನ ಮೌಲ್ಯದ ಮೂರು ಪಟ್ಟು ಪರಿಹಾರ ನೀಡಬೇಕಲ್ಲವೇ?

ಅದರ ಪ್ರಕಾರ 57 ಕೋಟಿ ರೂ. ಆಗುತ್ತದೆ. ಬಡ್ಡಿ ಸೇರಿದರೆ 62 ಕೋಟಿ ರೂ. ಆಗುತ್ತದೆ. ಬೇಕಿದ್ದರೆ ನಿವೇಶನ ವಾಪಸ್ ಪಡೆದುಕೊಳ್ಳಲಿ. ನಮಗೆ ಹಣ ಕೊಡಲಿ’ ಎಂದು ಹೇಳಿದರು.