ಹಾಸನ: ಕಾಂಗ್ರೆಸ್ಸನ್ನು ನಂಬಿದ್ದಕ್ಕೆ ನಮ್ಮ ಕುತ್ತಿಗೆ ಕೊಯ್ದರಲ್ಲಾ, ಚಾಕು ಹಾಕಿಸಿಕೊಳ್ಳಲು ಅವರ ಜತೆ ಇರಬೇಕಿತ್ತಾ? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಆಗಿಲ್ಲ, ವಿಲೀನವಾಗಿದೆ, ರಾಜ್ಯದಲ್ಲಿರುವುದು ಒಂದೇ ವಿರೋಧ ಪಕ್ಷ, ಸೋಲಿನ ಭಯ ಶುರುವಾಗಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ನಾವು ವಿಲೀನ ಆಗ್ತಿವಿ ಅಂತ ಹೇಳ್ತಿದ್ದೀರಲ್ಲಾ, ನೀವು ಏನ್ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನಲ್ಲಿರುವವರನ್ನು ಟೆಂಟು, ಗಳಗಳ ಸಮೇತ ಎಲ್ಲಾ ಕಿತ್ತು ಬಿಜೆಪಿಗೆ ಕಳುಹಿಸುತ್ತಿದ್ದೀರಲ್ಲಾ? ನಿಮ್ಮಲ್ಲಿದ್ದ ಮಾಜಿ ಮುಖ್ಯಮಂತ್ರಿ (ಎಸ್.ಎಂ.ಕೃಷ್ಣ) ಸೇರಿ ಎಲ್ಲರನ್ನೂ ಕಳುಹಿಸುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ, ಶಿವಕುಮಾರ್ ಇಬ್ಬರಿಗೂ ಹೇಳ್ತಿದ್ದೀನಿ, ಬಿಜೆಪಿ ಜತೆ ಮೈತ್ರಿ ಮಾಡ್ಕಳಕೆ ದೇವೇಗೌಡರೇ ಹೇಳಿ ಕಳುಹಿಸಿದ್ದಾರೆ ಅಂತ ನೀವು ಹೇಳಿದ್ದೀರಲ್ಲಾ.. ದೇವೇಗೌಡರು ಯಾಕೆ ಹೇಳಿದರು?
ಅವರ ಅರವತ್ತು ವರ್ಷ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ನಂಬಿ, ಕಾಂಗ್ರೆಸ್ ಸಂಕಷ್ಟದಲ್ಲಿದ್ದಾಗ ಧ್ವನಿಗೂಡಿಸಿ ಕೆಲಸ ಮಾಡಿದ್ರು, 2018 ರಲ್ಲಿ ನಿಮ್ಮ ಜತೆ ಸಂಬಂಧ ಬೆಳೆಸಿದ್ದೇವಲ್ಲವೆ? ನೀವು ಕೊಟ್ಟ ಕೊಡುಗೆ ಏನು?
ಪ್ರಧಾನಮಂತ್ರಿಗಳು ರಾಜೀನಾಮೆ ಕೊಟ್ಟು ಬಾ ಮುಂದಿನ ಮೂರು ವರ್ಷ ಮುಖ್ಯಮಂತ್ರಿ ಆಗು ಎಂದರು. ಆದರೆ ನೀವು ಕುತ್ತಿಗೆ ಕೊಯ್ದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಕ್ಕೂ ಈ ಚುನಾವಣೆ ಆಗಲಿ ಆಮೇಲೆ ಉತ್ತರ ಕೊಡೋಣ ಎಂದರು.