ನಾನು ಗೂಟದ ಕಾರಲ್ಲಿ ಬಂದರೆ ಪಕ್ಷದ ಸಂಘಟನೆ ಹೇಗಿರುತ್ತೆ ಅಂತ ನೋಡಿ, ದೇವೇಗೌಡರು ಇವನನ್ನು ಸೋಲಿಸಿ ಅಂತ ವ್ಹೀಲ್ ಚೇರ್ ನಲ್ಲಿ ಬಂದು ಭಾಷಣ ಮಾಡಿದರೂ ಜನರು ಸೋಲಿಸಲಿಲ್ಲ; ಕೆ.ಎಂ. ಶಿವಲಿಂಗೇಗೌಡ

ಹಾಸನ: ನನಗಿಂತ ತಮಟೆ ಹೊಡೆಯುವ ಶಾಸಕ ಇದ್ದರೆ ಅವರ ಪರ ಹೇಳಿ,  ಇಲ್ಲವೇ ನನ್ನನ್ನೇ ಮಂತ್ರಿ ಮಾಡುವಂತೆ ವರಿಷ್ಠರ ಬಳಿ ನನ್ನ ಪರ ಮಾತನಾಡಿ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದಾರೆ.

ಸ್ವಾಭಿಮಾನಿ ಸಮಾವೇಶದ ಹಿನ್ನೆಲೆಯಲ್ಲಿ ಚನ್ನರಾಯಪಟ್ಟಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಾನು ಗೂಟದ ಕಾರಿನಲ್ಲಿ ಬಂದರೆ ಹೇಗಿರುತ್ತೆ ಅಂತ ನೋಡಿ. ನನಗೆ ಅಧಿಕಾರ ಕೊಟ್ರೆ ಯಾಕೆ ಪಕ್ಷ ಸಂಘಟನೆ ಆಗಲ್ಲ. ನೀವೆಲ್ಲ ಈ ಬಗ್ಗೆ ಮಾತನಾಡಿ ಎಂದು ಮಾಜಿ ಶಾಸಕರಾದ ಎಂ.ಎ.ಗೋಪಾಲಸ್ವಾಮಿ, ಸಿ.ಎಸ್.ಪುಟ್ಟೇಗೌಡರನ್ನು ಆಗ್ರಹಿಸಿದರು.

 ನನ್ನನ್ನು ಸೋಲಿಸುವುದಕ್ಕೆ ದೇವೇಗೌಡರು ವೀಲ್ ಚೇರ್‌ನಲ್ಲಿ ಹಳ್ಳಿ ಹಳ್ಳಿಗೆ ಹೋದರು ಅವನನ್ನು ಸೋಲಿಸಿ ಎಂದ ಹೇಳಿದರು. ಆದರೂ ಜನರು ಸೋಲಿಸಿದ್ರಾ? ಎಂದು ದೇವೇಗೌಡರ ಭಾಷಣದ ಶೈಲಿಯನ್ನು ಅಣಕಿಸಿದರು.

ಕೈ ಮಸ್ಕಿನ ವ್ಯವಹಾರವೆಲ್ಲ ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡಬೇಕು. ನಾನು ಗೂಟದ ಕಾರಲ್ಲಿ ಬಂದರೆ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಹೇಗಿರುತ್ತದೆ ಅಂತ ನೋಡಿ. ಜಿಲ್ಲೆಯಲ್ಲಿ ಪಕ್ಷದಿಂದ ನಾನೊಬ್ಬನೇ ಗೆದ್ದಿರುವುದು. ಸಂಸದ ಶ್ರೇಯಸ್ ಅವರೂ ನನ್ನನ್ನೂ ಗೆಲ್ಲಿಸಲು ಇಂತಹವರು ಕಷ್ಟಪಟ್ಟಿದ್ದಾರೆ ಅಂತ ವರಿಷ್ಢರಿಗೆ ಹೇಳಬೇಕು ಎಂದರು.