ಅವರು ಅಧಿಪತ್ಯ ಸ್ಥಾಪಿಸಿ ಆಳ್ವಿಕೆ ನಡೆಸುತ್ತಿದ್ದ ಹಾಸನದಲ್ಲಿ ಈಗ ಗೆದ್ದಿರೋದು ಯಾರು ಅಂತ ಕುಮಾರಸ್ವಾಮಿಗೆ ನೆನಪಿದೆಯಾ?; ಸಿಎಂ ವಾಗ್ದಾಳಿ

ಆ.9 ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶ ಮಾಡುತ್ತೇವೆ.|ಅವರ ಕಾಲದ ಎಲ್ಲಾ ಹಗರಣಗಳನ್ನು ಬಿಚ್ಚಿಡುತ್ತೇವೆ.

ಹಾಸನ: ಈ ದೇಶದಲ್ಲಿ ಭ್ರಷ್ಟಾಚಾರದ ಪಿತಾಮಹ ಯಾರಾದರೂ ಇದ್ದರೆ ಅದು ಬಿಜೆಪಿಯವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಲು ಬಳಿ ಭೂ ಕುಸಿತ ಸ್ಥಳ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರದ್ದು 40% ಭ್ರಷ್ಟಾಚಾರ ಎಂದು ಕೆಂಪಣ್ಣ ಆರೋಪ ಮಾಡಿದ್ದರು ಎಂದರು.

ಇನ್ನು ಹತ್ತು ತಿಂಗಳು ಮಾತ್ರ ಕಾಂಗ್ರೆಸ್ ಸರ್ಕಾರ ಇರುತ್ತೆ ಎಂಬ ಕೇಂದ್ರ ಸಚಿ ಎಚ್.ಡಿ.ಕೆ. ಹೇಳಿಕೆಗೆ ಪ್ರತಿಕ್ರಿಯಿಸಿ ಸಿಎಂ, ಕುಮಾರಸ್ವಾಮಿ ಎಷ್ಟು ದಿನ ಮಂತ್ರಿಯಾಗಿರುತ್ತಾರೆ ಎನ್ನುವುದು ಲೆಕ್ಕ. ನಮಗೆ 136 ಸೀಟ್ ನೀಡಿ ಜನರು ಆಶೀರ್ವಾದ ಮಾಡಿದ್ದಾರೆ. ಕಳೆದ ಬಾರಿ 28 ಸ್ಥಾನ ಹೊಂದಿದ್ದ ಜೆಡಿಎಸ್ ಈಗ19 ಸೀಟ್ ಮಾತ್ರ ಗೆದ್ದಿದೆ.

ಇದು ಕುಮಾರಸ್ವಾಮಿ ಅವರಿಗೆ ಇದು ನೆನಪಿದೆಯಾ? ಹಾಸನದಲ್ಲಿ ಇವರ ಕುಟುಂಬದವರು ಅಧಿಪತ್ಯ ಸ್ಥಾಪಿಸಿ ಆಳ್ವಿಕೆ ಮಾಡುತ್ತಿದ್ದರು. ಈಗ ಹಾಸನದಲ್ಲಿ ಎಂಪಿ ಸ್ಥಾನ ಗೆದ್ದಿರುವವರು ಯಾರು? ಇದು ಅವರಿಗೆ ನೆನಪಿದೆಯಾ ಎಂದು ವ್ಯಂಗ್ಯವಾಡಿದರು.

ಬಿಜೆಪಿ-ಜೆಡಿಎಸ್ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕುಮಾರಸ್ವಾಮಿ, ಅಶೋಕ್, ವಿಜಯೇಂದ್ರ ಅವರಿಗೆ ಮಾತನಾಡಲು ನೈತಿಕತೆ ಇಲ್ಲ. ಅವರ ಕಾಲದ ಎಲ್ಲಾ ಹಗರಣಗಳನ್ನು ಬಯಲಿಗೆಳೆಯುತ್ತೇವೆ. ಈಗಾಗಲೇ ಸಭೆಗಳನ್ನು ಆರಂಭಿಸಿದ್ದೇವೆ. ರಾಮನಗರ, ಚನ್ನಪಟ್ಟಣದಲ್ಲಿ ಸಭೆ ಮಾಡಿದ್ದೇವೆ ಎಂದರು.

ಆ.9 ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶ ಮಾಡುತ್ತೇವೆ. ಅವರ ಕಾಲದ ಎಲ್ಲಾ ಹಗರಣಗಳನ್ನು ಬಿಚ್ಚಿಡುತ್ತೇವೆ. ಯಡಿಯೂರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ಆಗಿದೆ. ಅವರು ರಾಜಕೀಯದಲ್ಲಿ ಇರಲು‌ ನಾಲಾಯಕ್ ಎಂದರು.