ಅಹಂಕಾರಿಯಾಗುವುದಿಲ್ಲ, ಜನರ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುತ್ತೇನೆ; ಸಂಸದ ಶ್ರೇಯಸ್ ಪಟೇಲ್

ಪ್ಲ್ಯಾನ್ ಬೆಂಗಳೂರು ಮಾದರಿಯಲ್ಲಿ ಹಾಸನ ಅಭಿವೃದ್ಧಿಗೆ ಜನರ ಸಲಹೆ ಸ್ವೀಕಾರ| ಉದ್ಯಮ ಸ್ಥಾಪಿಸಲು ಕೋರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡುತ್ತೇನೆ

ಹಾಸನ: ಚುನಾವಣೆ ಗೆದ್ದಿದ್ದೇನೆ ಎನ್ನುವ ಅಹಂಕಾರ ತೋರಿಸದೇ ಜನರ ನಂಬಿಕೆ. ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುತ್ತೇನೆ. ಸಾರ್ವಜನಿಕರ ಕೈಗೆ ಸುಲಭವಾಗಿ ಸಿಗುವಂತಹ ಸಂಸದನಾಗುತ್ತೇನೆ ಎಂದು ಹಾಸನ ಲೋಕಸಭಾ ಕ್ಷೇತ್ರದ ನೂತನ ಸದಸ್ಯ ಶ್ರೇಯಸ್ ಪಟೇಲ್ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ನನ್ನ ಮುಂದೆ ಹಲವು ಸವಾಲು, ನಿರೀಕ್ಷೆಗಳಿವೆ. 25 ವರ್ಷಗಳ ನಂತರ ನಮ್ಮ ಪಕ್ಷಕ್ಕೆ ಸಂಸದ ಸ್ಥಾನ ದೊರಕಿದ ಸಂತೋಷ ಇದೆ. ಜೂ. 24 ಅಥವಾ 25ರಂದು ದೆಹಲಿಗೆ ತೆರಳಿ ಪ್ರತಿಜ್ಞಾವಿಧಿ ಸ್ವೀಕರಿಸುತ್ತೇನೆ. ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚಿಸುತ್ತೇನೆ ಎಂದರು.

ಕಾಡಾನೆ ದಾಳಿ ನಮ್ಮ ಜಿಲ್ಲೆಯ ದೊಡ್ಡ ಸಮಸ್ಯೆಯಾಗಿದೆ. ಡಿಎಫ್ಒ, ಆನೆ ಹಾವಳಿಗೆ ಕಡಿವಾಣ ಹಾಕುವ ಯೋಜನೆಗೆ ಕೇಂದ್ರ ಸರ್ಕಾರದಿಂದ 50 ಕೋಟಿ ರೂ. ಬಿಡುಗಡೆಗೆ ಕೋರಿದ್ದಾರೆ. ಈ ಸಂಬಂಧ ವಿಸ್ತೃತ ವರದಿ ನೀಡಲು ಸೂಚಿಸಿದ್ದೇನೆ. ಜಿಲ್ಲೆಯ ಎಲ್ಲ ಶಾಸಕರು ಮುಖಂಡರನ್ನೊಳಗೊಂಡ ನಿಯೋಗದೊಂದಿಗೆ ಸಿಎಂ ಭೇಟಿ ಮಾಡಲಿದ್ದೇವೆ. ಈ ಸಮಸ್ಯೆಯನ್ನೇ ಆದ್ಯತೆಯಾಗಿ ಪರಿಗಣಿಸಲಿದ್ದೇನೆ. ಮೊದಲ ಅಧಿವೇಶದಲ್ಲಿಯೇ ಈ ಬಗ್ಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.

ಜಿಲ್ಲಾ ಕೇಂದ್ರದಲ್ಲಿ ಹಲವಾರು ಸಮಸ್ಯೆಗಳಿವೆ. ರಾಜ್ಯ ಸರ್ಕಾರದಿಂದ ಹೊಸ ಬಸ್ ನಿಲ್ದಾಣ ರಸ್ತೆಯ ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯವಾದ ಅನುದಾನ ಬಿಡುಗಡೆ ಮಾಡಿಸಲು ಯತ್ನಿಸುತ್ತೇನೆ.

ಪ್ರವಾಸೋದ್ಯಮ ಅಭಿವೃದ್ಧಿ ಬಹಳ ಮುಖ್ಯವಾಗಿದೆ. ಜಿಲ್ಲೆಯಲ್ಲಿ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಅಲ್ಲದೇ ಹಲವಾರು ಪುರಾತನ ದೇವಾಲಯಗಳು ಹಾಗೂ ಪ್ರಾಕೃತಿಕ ಸೌಂದರ್ಯದ ತಾಣಗಳಿವೆ. ಪ್ರವಾಸೋದ್ಯಮದ ಬೆಳವಣಿಗೆಗೆ ಯೋಜನೆ ರೂಪಿಸಲಾಗುವುದು ಎಂದರು.

ಜಿಲ್ಲೆಯಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಉದ್ಯಮಗಳನ್ನು ಸ್ಥಾಪಿಸುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತೇನೆ ಎಂದರು.

ಜಿಲ್ಲೆಯನ್ನು ಭ್ರಷ್ಟಾಚಾರ ಮುಕ್ತಗೊಳಿಸಬೇಕು. ಎಲ್ಲ ಶಾಸಕರನ್ನು ದಿಶಾ ಸಮಿತಿಯಲ್ಲಿ ಮಾತನಾಡಿ ವಿಶ್ವಾಸಕ್ಕೆ ಪಡೆಯುತ್ತೇನೆ. ಹಾಸನದ ಏರ್ ಪೋರ್ಟ್ ಕಾಮಗಾರಿ ಪೂರ್ಣವಾಗಿಲ್ಲ. ಹಣ ಬಿಡುಗಡೆ, ಭೂ ಪರಿಹಾರ ವಿತರಣೆಯಂತಹ ಸಮಸ್ಯೆಗಳಿವೆ. ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಯವರಿಗೆ ಜುಲೈ ಎರಡನೇ ವಾರ ಏರ್ ಪೋರ್ಟ್ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಾದ ಕ್ರಮಗಳ ಬಗ್ಗೆ ಚರ್ಚಿಸಲು ಸಭೆ ಕರೆಯುವಂತೆ ಸೂಚಿಸಿದ್ದೇನೆ ಎಂದರು.

ಜನಪ್ರತಿನಿಧಿಯಾಗಿ ಸದಾ ಜನರಿಗೆ ಲಭ್ಯವಿರಬೇಕು. ಮತದಾರರಿಗೆ ಚುನಾವಣೆ ಸಂದರ್ಭದಲ್ಲಿ ನೀಡಿರುವ ಭರವಸೆಯಂತೆ ನಡೆದುಕೊಳ್ಳುತ್ತೇನೆ. ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಗ್ರಾಮ ಪಂಚಾಯಿತಿವಾರು ಭೇಟಿ ನೀಡಿ ಜನರ ಬಳಿಗೇ ಆಡಳಿತ ಕೊಂಡೊಯ್ಯುವ ಗುರಿ ಇದೆ. ಕೇಂದ್ರ ಸರ್ಕಾರ ಮುಂದಿನ‌ ದಿನಗಳಲ್ಲಿ ಹೇಗೆ ಸ್ಪಂದಿಸಲಿದೆ ಎನ್ನುವುದು ಮುಂದೆ ಅರ್ಥವಾಗಲಿದೆ. ಜನರು ನನ್ನ ಮೇಲೆ ಭಾರಿ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ರಾಜ್ಯ ಸರ್ಕಾರದ ನೆರವು ಬಳಸಿಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡುವ ಗುರಿ ಇದೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪ್ಲ್ಯಾನ್ ಬೆಂಗಳೂರು ಮಾದರಿಯಲ್ಲಿ ನೆರವು ಹೆಸರಿನಲ್ಲಿ ಕಾರ್ಯಕ್ರಮ ರೂಪಿಸಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡುಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸಲಾಗುವುದು ಎಂದರು.

ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್.ವೇಣುಕುಮಾರ್, ರಾಜ್ಯ ಸಮಿತಿ ಸದಸ್ಯ ಎಚ್.ಬಿ.ಮದನಗೌಡ, ವಿಶೇಷ ಆಹ್ವಾನಿತ ರವಿನಾಕಲಗೂಡು, ಉಪಾಧ್ಯಕ್ಷ ಕೆ.ಎಂ.ಹರೀಶ್, ಕಾರ್ಯದರ್ಶಿ ಸಿ.ಬಿ.ಸಂತೋಷ್ ನೂತನ ಸಂಸದರನ್ನು ಅಭಿನಂದಿಸಿದರು.