ಜನಕಲ್ಯಾಣೋತ್ಸವ ಯಶಸ್ಸು ನನಗೆ ಆನೆಬಲ ನೀಡಿದೆ: ಸಿದ್ದರಾಮಯ್ಯ

ನಾನು ಸತ್ಯದ ಪರ, ಅಂತಿಮವಾಗಿ ಗೆಲ್ಲೋದು ಸತ್ಯ ವಿರೋಧಿಗಳ ಷಡ್ಯಂತ್ರ ಎದುರಿಸ್ತೇನೆ: ಸಿದ್ದರಾಮಯ್ಯ

ಬೆಂಗಳೂರು: ‘ಸತ್ಯ, ಧರ್ಮ ಮತ್ತು ನ್ಯಾಯದ ನಡಿಗೆ ಯಲ್ಲಿ ನನ್ನ ಜತೆ ಈ ನಾಡಿನ ಪ್ರಜ್ಞಾವಂತರು, ಶೋಷಿತರು ಇದ್ದಾರೆಂಬುದಕ್ಕೆ ಸಮಾವೇಶದಲ್ಲಿ ಸೇರಿದ್ದ ಜನಸಾಗರವೇ ಸಾಕ್ಷಿ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಇರುವವರೆಗೆ ರಾಜಕೀಯ ವಿರೋಧಿಗಳ ಯಾವ ಷಡ್ಯಂತ್ರ, ಬೆದರಿಕೆಗಳಿಗೂ ಜಗ್ಗದೆ, ಕುಗ್ಗದೆ ಎದುರಿಸುತ್ತೇನೆ’ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹಾಸನದ ಸಮಾವೇಶ ಯಶಸ್ಸಿನ ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೆ ನೀಡಿರುವ ಅವರು, ‘ಹಾಸನದಲ್ಲಿ ನಡೆದ ಜನಕಲ್ಯಾಣೋತ್ಸವದ ಅಭೂತಪೂರ್ವ ಯಶಸ್ಸು ಆನೆಬಲ ನೀಡಿದೆ. ಪಕ್ಷದ ಮೇಲಿನ ಪ್ರೀತಿಯಿಂದ ದೂರದ ಊರುಗಳಿಂದ ಬಂದು ದ್ವೇಷರಾಜಕಾರಣದ ವಿರುದ್ಧದ ನನ್ನ ದನಿಗೆ ದನಿಗೂಡಿಸಿದ ಎಲ್ಲಾ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರಿಗೆ ನಾನು ಋಣಿ’ ಎಂದು ಹೇಳಿದ್ದಾರೆ.

ಕಾರ್ಯಕ್ರಮದ ಆಯೋಜನೆಗೆ ಶ್ರಮಿ ಸಿದ ಶೋಷಿತ ಸಮುದಾಯಗಳ ಸಂಘಟನೆಗಳು ಮತ್ತು ಪಕ್ಷದ ನಾಯಕರಿಗೆ ಅನಂತ ಧನ್ಯವಾದಗಳು. ಸತ್ಯ, ಧರ್ಮ ಮತ್ತು ನ್ಯಾಯದ ನಡಿಗೆಯಲ್ಲಿ ನನ್ನ ಜೊತೆ ಈ ನಾಡಿನ ಪ್ರಜ್ಞಾವಂತರು, ಶೋಷಿತ ಜನ ಇದ್ದಾರೆ ಎಂಬುದಕ್ಕೆ ಇಂದು ಸೇರಿದ್ದ ಜನ ಸಾಗರಸಾಕ್ಷಿ. ನಿಮ್ಮೆಲ್ಲರಪ್ರೀತಿ-ಆಶೀರ್ವಾದ ಇರುವವರೆಗೆ ನಾನು ಎಲ್ಲವನ್ನೂ ಎದುರಿಸಿ ಗೆಲ್ಲುತ್ತೇನೆ. ನಾನು ಸತ್ಯದ ಪರವಾಗಿದ್ದೇನೆ, ಅಂತಿಮವಾಗಿ ಗೆಲ್ಲುವುದು ಸತ್ಯವೇ ಎಂದು ಹೇಳಿದ್ದಾರೆ.