ಹಾಸನ: ನಾಗತವಳ್ಳಿ ಪಾರ್ಕ್ ಜಾಗ ಸಂಬಂಧ ಕೆಐಎಡಿಬಿ ಹಾಗೂ ಗ್ರಾಮಸ್ಥರ ನಡುವೆ ಏರ್ಪಟ್ಟಿರುವ ಹಗ್ಗಜಗ್ಗಾಟದ ವಿಚಾರದಲ್ಲಿ ನನ್ನ ಪಾತ್ರ ಇಲ್ಲ, ಆಕ್ರಮವೂ ನಡೆದಿಲ್ಲ, ನಾನು ಎಂದಿಗೂ ಕಾನೂನು ಬದ್ಧವಾಗಿ ಕೆಲಸ ಮಾಡುತ್ತೇನೆ. ಅಕ್ರಮ ಮಾಡುತ್ತಿರುವವರು ಯಾರು ಎಂಬುದು ಇಡೀ ಜಿಲ್ಲೆಗೆ ಗೊತ್ತಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಗಳಿಗೆ ಸಂಸದ ಶ್ರೇಯಸ್ ಪಟೇಲ್ ತಿರುಗೇಟು ನೀಡಿದರು.
ನಗರದ ಸಂಸದರ ಕಚೇರಿಯಲ್ಲಿ ಇಂದು ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗತವಳ್ಳಿ ಪಾರ್ಕ್ ಜಾಗ ಖಾಸಗಿಯವರ ಪಾಲಾಗಲು ಎಂಪಿ ಅವರ ಕೈವಾಡ ಇದೆ ಎಂಬ ರೇವಣ್ಣ ಆರೋಪಕ್ಕೆ ಖಾರವಾಗಿ ಪ್ರತಿಕ್ರಿಯಿಸಿದರು.
ನಾನು ಸಂಸದನಾದಾಗ ಸತ್ಯ, ಪ್ರಾಮಾಣಿಕತೆ ಬಗ್ಗೆ ಪ್ರಮಾಣವಚನ ಸ್ವೀಕರ ಮಾಡಿ ಜವಾಬ್ದಾರಿಯುತ ಸಂಸದ ಸ್ಥಾನದಲ್ಲಿ ಇದ್ದುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ ಅದೇ ರೀತಿ ನನ್ನ ಬಗ್ಗೆ ಮಾತನಾಡುವವರು ಕೂಡ ಪ್ರಾಮಾಣಿಕತೆ ಉಳಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ನಾಗತವಳ್ಳಿ ಪಾರ್ಕ್ ವಿಚಾರ KAIDB ಹಾಗೂ ಗ್ರಾಮಸ್ಥರ ನಡುವೆ ಕಳೆದ ಅನೇಕ ದಿನಗಳಿಂದ ಹಗ್ಗ ಜಗ್ಗಾಟ ನಡೆಯುತ್ತಿದೆ, ಕಾನೂನಿನ ಪರಿಮಿತಿಯಲ್ಲಿ ಸೂಕ್ತವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಅದರಂತೆ ಅಧಿಕಾರಿಗಳು ಮಾಡುತ್ತಾರೆ ಎಂದರು.
ಸಾಕ್ಷಿ ಆಧಾರಗಳಿಲ್ಲದೆ ಈ ರೀತಿಯ ಹೇಳಿಕೆಗಳನ್ನು ನೀಡಬಾರದು. ನಾನು ಎಂದಿಗೂ ಬಡವರ ನೊಂದವರ ಪರ ಕೆಲಸ ಮಾಡುವವನು ಆದರೆ ಗ್ರಾಮೀಣ ಭಾಗದ ಮುಗ್ಧ ಜನರನ್ನು ದಿಕ್ಕು ತಪ್ಪಿಸುವ ಕೆಲಸಗಳನ್ನು ಅವರು, ಮಾಡುತ್ತಿದ್ದಾರೆ ಎಂದ ಅವರು, ಜನರಿಗೆ ತಪ್ಪು ಮಾಹಿತಿ ನೀಡಿ ಒಬ್ಬರಿಂದ ಒಬ್ಬರಿಗೆ ಎತ್ತಿ ಕಟ್ಟುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ತಮ್ಮ ಸಮಾಧಾನ ವ್ಯಕ್ತಪಡಿಸಿದ್ದರು.