ಟಾರ್ಗೆಟ್ ಪ್ರತಾಪ್ ಸಿಂಹ ಅಂತ ಎಲ್ಲರಿಗೂ ಗೊತ್ತಿದೆ; ನಾನು ಮರ ಕಡಿದಿಲ್ಲ; ಮೈಸೂರು ಸಂಸದರ ತಮ್ಮ ವಿಕ್ರಂ ಸ್ಪಷ್ಟನೆ

ಹಾಸನ : ಬೇಲೂರು ತಾಲ್ಲೂಕು ನಂದಗೋಡನಹಳ್ಳಿ ಸರ್ವೆ ನಂ. 16ರಲ್ಲಿನ ಮರಗಳ ಹನನ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹ ಅವರು ಪ್ರತಿಕ್ರಿಯಿಸಿದ್ದಾರೆ.

ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಶುಂಠಿ ಬೆಳೆಯುವ ಉದ್ದೇಶದಿಂದ ಜಮೀನು ಬಾಡಿಗೆ ಪಡೆದಿದ್ದೇನೆ.
ಮರಗಳ ಮಾರಣಹೋಮಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಶುಂಠಿ ಬೆಳೆಯಲು ಒಂದು ವರ್ಷಕ್ಕೆ ಅಗ್ರಿಮೆಂಟ್ ಮಾಡಿಕೊಂಡಿದ್ದೇನೆ. ಮರಗಳು ಹನನವಾಗಿರುವ ವಿಚಾರ ನನಗೆ ಬೇರೆಯವರಿಂದ ತಿಳಿದಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ನನ್ನ ಸಹೋದರ ಪ್ರತಾಪ್ ಸಿಂಹ ಹೆಸರಿಗೆ ಮಸಿ ಬಳಿಯಬೇಕೆಂದು ಕೆಲವರು ಪ್ರಯತ್ನಿಸುತ್ತಿದ್ದಾರೆ. ರಾಜಕೀಯದಲ್ಲಿ ಏನೇನಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

ಚುನಾವಣೆ ಹತ್ತಿರ ಬರುತ್ತಿರುವುದರಿಂದ ನನ್ನ ಅಣ್ಣನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದೆಲ್ಲವೂ ರಾಜಕೀಯ ಪ್ರೇರಿತವಾಗಿದ್ದು ನಾನು ಹೆದರುವುದಿಲ್ಲ ಎಂದರು.
ಶುಂಠಿ ಬೆಳೆಯುವ ಉದ್ದೇಶದಿಂದ ಆ ಭೂಮಿಯನ್ನು ಬಾಡಿಗೆ ಪಡೆದಿದ್ದೇನೆ. ಅಷ್ಟು ಮಾತ್ರಕ್ಕೆ ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸುವುದು ಎಷ್ಟರ ಮಟ್ಟಿಗೆ ಸರಿ. ಅರಣ್ಯ ಅಧಿಕಾರಿಗಳೇನು ದಡ್ಡರಾ? ಯಾರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅವರಿಗೆ ತಿಳಿದಿಲ್ಲವಾ ಎಂದರು.

ಸಮಗ್ರ ತನಿಖೆಯಾಗಲಿ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಮರಗಳನ್ನು ನೆಲಸಮಗೊಳಿಸಿರುವ ವಿಚಾರದ ಕುರಿತು ಸಮಗ್ರ ತನಿಖೆಯಾಗಲಿ. ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿರುವ ಎಲ್ಲರಿಗೂ ಲೀಗಲ್ ನೋಟೀಸ್ ನೀಡುತ್ತೇನೆ. ಈ ಬಗ್ಗೆ ಬೇಲೂರು ತಹಶೀಲ್ದಾರ್ ಜೊತೆಯೂ ಮಾತನಾಡುತ್ತೇನೆ.
ನನ್ನ ವಿರುದ್ಧ ಅರಣ್ಯ ಸಚಿವರಿಗೆ ದೂರು ನೀಡಿರುವ ವಿ.ಕೆ.ದೀಪಕ್ ಯಾರು ಎಂಬುದು ನನಗೆ ಗೊತ್ತಿಲ್ಲ. ಇಷ್ಟೆಲ್ಲ ಮಾಹಿತಿ ಇರುವ ಅವರನ್ನು ಮೊದಲು ತನಿಖೆಗೆ ಒಳಪಡಿಸಲಿ ಎಂದು ಸಲಹೆ ನೀಡಿದರು.