ಹಾಸನ: ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನೂ ನಾನು ಭೇಟಿ ಮಾಡಿಲ್ಲ, ದೇವರಾಜೇಗೌಡ ಹೇಳುತ್ತಿರುವುದು ಹಸಿ ಸುಳ್ಳು ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ಪಟೇಲ್ ಹೇಳಿದರು.
ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡ ದೇವರಾಜೇಗೌಡ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಸುಳ್ಳಿನ ಸುರಿಮಳೆಯನ್ನು ನಮ್ಮ ನಾಯಕರು, ನಮ್ಮ ಮೇಲೆ ಮಾಡಿದ್ದಾರೆ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದರು.
ನಾನು ಯಾವುದೇ ಸಂತ್ರಸ್ತೆಯನ್ನೂ ಭೇಟಿ ಮಾಡಿಲ್ಲ.
ಸ್ಕೈಬರ್ಡ್ ಹೋಟೆಲ್‌ನಲ್ಲಿ ಸಿಸಿಟಿವಿ ವಿಡಿಯೋ ಇದೆ ಪರಿಶೀಲನೆ ನಡೆಸಲಿ. ಹಾಸನ, ಹೊಳೆನರಸೀಪುರದಲ್ಲಿ ಬಹಿರಂಗವಾಗಿ ಚರ್ಚೆ ಬರಲಿ. ನನ್ನ ಪಾತ್ರ ಇದೆ ಸಾಬೀತು ಮಾಡಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಜೂ.4 ರಂದು ಜನರ ಆಶೀರ್ವಾದದಿಂದ ಗೆದ್ದರೆ ಅಂದೇ ರಾಜೀನಾಮೆ ಕೊಡುತ್ತೇನೆ ಎಂದು ಸವಾಲು ಹಾಕಿದರು.
ಇವರು ಎಸ್‌ಐಟಿ ತನಿಖೆ ದಿಕ್ಕು ತಪ್ಪಿಸುತ್ತಿದ್ದಾರೆ. ಅವರು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಯಾವ ಪಕ್ಷದಲ್ಲಿ ಇದ್ದಾರೆ? ಎನ್.ಆರ್.ವೃತ್ತದಲ್ಲಿ ಎಲ್ಇಡಿ ಹಾಕಿಸಿ ವಿಡಿಯೋ ತೋರಿಸುತ್ತೇನೆ ಅಂತ ಹೇಳಿದವರು ಯಾರು? ಎಂದು ಪ್ರಶ್ನಿಸಿದರು.
ಈ ಪ್ರಕರಣ ಸರಿಯಾಗಿ ತನಿಖೆ ನಡೆಯಬೇಕು. ದೇವರಾಜೇಗೌಡ ಅವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ಆ ಬಗ್ಗೆ ಈಗಾಗಲೇ ವಕೀಲರ ಜತೆ ಮಾತನಾಡಿದ್ದೇನೆ. ನನಗೆ ಕಳಂಕ ಬರುವ ಕೆಲಸ ಮಾಡುತ್ತಿರುವ ದೇವರಾಜೇಗೌಡ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದರು.
ಪೆನ್‌ಡ್ರೈವ್ ವಿಚಾರ ಮಾತನಾಡಲು ಅಸಹ್ಯ ಆಗುತ್ತೆ. ನಾನು ಸುಸಂಸ್ಕೃತ ಕುಟುಂಬದಿಂದ ಬಂದವನು. ಅಕ್ಕ-ತಂಗಿಯರ ಜತೆ ಬೆಳೆದವನು. ಈ ಗೊಜ್ಜೆ ರಾಜಕಾರಣಕ್ಕೆ ಕಾರಣ ದೇವರಾಜೇಗೌಡ. ಎಸ್‌ಐಟಿ ದಿಕ್ಕು ತಪ್ಪಿಸಲು ಈ ರೀತಿ ಮಾತನಾಡುತ್ತಿದ್ದಾರೆ. ತಾನು ತಿಂದು ಬೇರೆಯವರ ಬಾಯಿಗೆ ಒರೆಸುತ್ತಿದ್ದಾರೆ.ದೇವರಾಜೇಗೌಡ ಬದ್ದತೆ ಇಲ್ಲದ ರಾಜಕಾರಣಿ ಎಂದು ವಾಗ್ದಾಳಿ ನಡೆಸಿದರು.
ಇವರು ರಾಜಕಾರಣಿನೋ?ವಕೀಲನೋ? ಗೊತ್ತಿಲ್ಲ. ಇದೆಲ್ಲಾ ರಾಜಕೀಯ ಷಡ್ಯಂತ್ರ. ಈ ತನಿಖೆ ದಿಕ್ಕಿತಪ್ಪಿಸುವ ಕೆಲಸ ವಹಿಸಿಕೊಂಡಿದ್ದಾರೆ. ನಾನು ಯಾವ ತನಿಖೆಗಾದರೂ ನಾನು ಸಿದ್ಧ. ನನ್ನ ಹೆಸರು ಏಕೆ ತೆಗೆದುಕೊಂಡಿದ್ದಾರೆ ಗೊತ್ತಿಲ್ಲ. ನಾನು ಚರ್ಚೆಗೆ ಸಿದ್ಧನಿದ್ದೇನೆ, ನನ್ನ ಮುಂದೆ ದಾಖಲೆ ತೋರಿಸಲಿ. ಆಡಿಯೋಗಳನ್ನು ಅವರೇ ಸೃಷ್ಟಿ ಮಾಡಿದ್ದಾರೆ ಎಂದು ಹರಿಹಾಯ್ದರು.