ಹಾಸನ: ನಾನು 27 ವರ್ಷಕ್ಕೇ ಸಂಸದನಾದೆ, ಸಣ್ಣಪುಟ್ಟ ತಪ್ಪುಗಳಾಗಿದ್ದರೆ ಕ್ಷಮೆ ಇರಲಿ, ಮುಂದಿನ ದಿನಗಳಲ್ಲಿ ಸಕ್ರಿಯವಾಗಿ ನಿಮ್ಮ ಜತೆ ಇರ್ತಿನಿ. ನಿಮಗೆ ಹಾಗೂ ಪಕ್ಷಕ್ಕೆ ಶಕ್ತಿ ತುಂಬವ ಕೆಲಸ ಮಾಡುತ್ತೇನೆ ಎಂದು ಸಂಸದ ಪ್ರಜ್ಚಲ್ ರೇವಣ್ಣ ಜೆಡಿಎಸ್ ಕಾರ್ಯಕರ್ತರನ್ನುದ್ದೇಶಿ ಹೇಳಿದರು.
ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಬುಧವಾರ ಸಂಜೆ ಜೆಡಿಎಸ್ ಸರ್ಕಾರ ಹಾಗೂ ಪ್ರಜ್ವಲ್ ಲೋಕಸಭಾ ಸದಸ್ಯರ ಅವಧಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ನಾನು ಸಂಸದನಾದಗಿನಿಂದ ಸುಮ್ಮನೆ ಕೂತಿಲ್ಲ, ನಾನು ಪ್ರತಿದಿನ ಒಂದಲ್ಲ ಒಂದು ಕ್ಷೇತ್ರದಲ್ಲಿ ಓಡಾಡಿದ್ದೀನಿ. ಆದರೆ ನನ್ನನ್ನು ಒಬ್ಬ ಶಾಸಕನಂತೆ ನೋಡ್ತಾರೆ. ಆ ದೇವಸ್ಥಾನ, ಈ ದೇವಸ್ಥಾನ ಉದ್ಘಾಟನೆಗೆ ಬಂದಿಲ್ಲ ಅಂತಾರೆ. ಎಲ್ಲಾ ಕಡೆನೂ ಒಬ್ಬ ಸಂಸದನಿಗೆ ಹೋಗಲು ಆಗಲ್ಲ ಎಂದರು.
ಐದು ವರ್ಷದಲ್ಲಿ ನನ್ನ ಕೈಲಾದಷ್ಟು ಕೆಲಸ ಮಾಡಿದ್ದೀನಿ, ಮುಂದೆ ಇನ್ನೂ ಹೆಚ್ಚಿನ ಕೆಲಸ ಮಾಡ್ತಿನಿ. ಒಂದು ದಿನದಲ್ಲಿ ಮೂರರಿಂದ ನಾಲ್ಕು ಕ್ಷೇತ್ರಕ್ಕೆ ಹೋಗಬೇಕು. ನನಗೆ 4954 ಹಳ್ಳಿಗಳು ಬರ್ತಾವೆ, 337 ಪಂಚಾಯ್ತಿಗಳಿಗೆ ಹೋಗಿದ್ದೀನಿ ಎಂದರು.
ಈ ಐದು ವರ್ಷ ಜನಪರ ಕೆಲಸ ಮಾಡಿದ್ದೀನಿ, ನನಗೆ ಇನ್ನಷ್ಟು ಶಕ್ತಿ ಕೊಟ್ಟಿದ್ದೀರಿ. ಶಾಸಕರು ನನ್ನನ್ನು ಸಾಕಷ್ಟು ಹೊಗಳಿದರು, ಅವರ ಸಹಕಾರದಿಂದ ಇಷ್ಟು ಕೆಲಸ ಮಾಡಲು ಸಾಧ್ಯವಾಯಿತು ಎಂದರು.
ಜಿಲ್ಲೆಗೆ ಏಳು ಫ್ಯಾಕ್ಟರಿಗಳನ್ನು ಹಾಸನಕ್ಕೆ ತರುವ ಕೆಲಸ ಮಾಡಿದ್ದೇನೆ, ಸ್ಥಳೀಯರಿಗೆ ಕೆಲಸ ಸಿಗಬೇಕು. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರಲಿ, ಮುಂದಿನ ಚುನಾವಣೆಯಲ್ಲಿ ನನ್ನನ್ನು ಮತ್ತೊಮ್ಮೆ ಆಯ್ಕೆ ಮಾಡಲು ನೀವೆಲ್ಲಾ ನಿರ್ಧರಿಸಿದ್ದೀರಿ.
ಮತ್ತೊಮ್ಮೆ ನನ್ನನ್ನು ಆಯ್ಕೆ ಮಾಡಿ ಮತ್ತಷ್ಟು ಕೆಲಸ ಮಾಡಲು ಅವಕಾಶ ಕೊಡಿ ಎಂದು ಸಂಸದ ಪ್ರಜ್ವಲ್‌ರೇವಣ್ಣ ಮನವಿ ಮಾಡಿದರು.