‘ನಾನು, ನನ್ನ ಮನಸ್ಸು, ರಂಗನಾಥಸ್ವಾಮಿ ಅಷ್ಟೇ’ ಎಂದ ದೊಡ್ಡಗೌಡರು; ರಾಜಕೀಯದಿಂದ‌ ದೂರವಾಗ್ತಾರಾ ಜೆಡಿಎಸ್ ವರಿಷ್ಠ?

ನಾನು ಆರೋಗ್ಯವಾಗಿರಲು ಡಾಕ್ಟರ್‌ಗಳ ಪ್ರಾಮಾಣಿಕ ಪ್ರಯತ್ನ ಕಾರಣ. ಭಗವಂತನ ಅನುಗ್ರಹ, ನನ್ನ ಅಳಿಯ, ಸುದರ್ಶನ್, ಬಲ್ಲಾಳ್ ಅಂಡ್ ಟೀಂನ ಪ್ರಯತ್ನದಿಂದ ಬದುಕಿದ್ದೇನೆ

ಹಾಸನ: ನನ್ನ ಆರೋಗ್ಯ ಗುಣಮುಖವಾದರೆ ನಿನ್ನ ಸಮ್ಮುಖದಲ್ಲಿ 1001 ಕಳಸ, ಪೂಜಾ ಕೈಂಕರ್ಯ ಮಾಡ್ತಿನಿ ಎಂದು ಹರಕೆ ಕಟ್ಟಿಕೊಂಡಿದ್ದೆ ಅದನ್ನು ತೀರಿಸಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ಹೊಳೆನರಸೀಪುರ ತಾಲ್ಲೂಕಿನ, ಮಾವಿನಕೆರೆ ಬೆಟ್ಟದಲ್ಲಿನ‌ ರಂಗನಾಥ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿರುವ ಅವರು ಬಿಡುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ನಿನ್ನೆ ಸಂಜೆ ಆರು ಗಂಟೆಯಿಂದ ರಂಗನಾಥನ ಸಾನ್ನಿಧ್ಯದಲ್ಲಿ ವಿಧಿವತ್ತಾಗಿ, ಶಾಸ್ತ್ರೋಕ್ತವಾಗಿ, ನಮ್ಮ‌ ಸಂಪ್ರದಾಯದಲ್ಲಿ ಪೂಜಾ ಕಾರ್ಯಕ್ರಮಗಳನ್ನು ಮಾಡತ್ತಿದ್ದೇವೆ. ತುಂಬಾ ಜನ ಪುರೋಹಿತರಿದ್ದಾರೆ, ಹೊರಗಡೆಯಿಂದ ಬಂದಿದ್ದಾರೆ. ನಾಳೆ ನಾಲ್ಕು ಗಂಟೆಗೆ ಪೂಜಾ ಕಾರ್ಯಕ್ರಮ ಮುಗಿಯಬಹುದು‌ ಎಂದರು.

ಇದರಲ್ಲಿ ಯಾವುದೇ ರಾಜಕೀಯ ಇಲ್ಲ, ಯಾರೂ ಇದರಲ್ಲಿ ರಾಜಕೀಯ ಬೆರಸಬಾರದು. ನಾನು, ನನ್ನ ಶ್ರೀಮತಿ, ಭವಾನಿ, ರೇವಣ್ಣ ಅವರು ಪಾಲ್ಗೊಂಡಿದ್ದಾರೆ. ನಾವು ದೇವರನ್ನು ನಂಬಿದ್ದೇವೆ. ನಮ್ಮ ತಂದೆ ಇಲ್ಲಿ ಹಳೆಯ ದಾರಿಯಲ್ಲಿ ನನ್ನನ್ನು ಕರೆದುಕೊಂಡು ಬರ್ತಿದ್ದರು ಎಂದು‌ ನೆನಪು ಮೆಲುಕು ಹಾಕಿದರು.

ಮೂರು, ನಾಲ್ಕು, ಐದು ಶ್ರಾವಣ ಶನಿವಾರ ಬರುತ್ತೆ, ಈ ಪೂಜಾ ಕಾರ್ಯಕ್ರಮದ ವ್ಯವಸ್ಥೆಯನ್ನು ನಾನು, ರೇವಣ್ಣ ಮಾಡಿದ್ರೆ ಅಪಾರ್ಥ ಕಲ್ಪಿಸುತ್ತಾರೆ ಎಂಬ ಕಾರಣಕ್ಕಾಗಿ
ನನ್ನ ಮಿತ್ರರಿಗೆ ಹೇಳಿದ್ದೆ. ಅವರೇ ಖದ್ದು ನಿಂತು ಎಲ್ಲಾ ಮಾಡಿದ್ದಾರೆ. ಬಂದವರಿಗೆ ಎಲ್ಲರಿಗೂ ಸಮರ್ಪಕವಾಗಿ ಪ್ರಸಾದ ವಿತರಿಸಿದ್ದಾರೆ ಎಂದರೆ.

ನನ್ನ ಆರೋಗ್ಯದ ಪ್ರಶ್ನೆಗೆ ಬಂದರೆ ಎರಡು ವರ್ಷಗಳಿಂದ ಭಗವಂತನ ಅನುಗ್ರಹದಿಂದ ಬದುಕಿದ್ದೇನೆ. ನನ್ನ ಅಳಿಯ ಡಾ.ಸಿ.ಎನ್. ಮಂಜುನಾಥ್, ಮಣಿಪಾಲ್ ಆಸ್ಪತ್ರೆ ಮುಖ್ಯಸ್ಥರಾದ ಸುದರ್ಶನ್ ಬಲ್ಲಾಳ್ ಮತ್ತು ಅವರ ತಂಡ ಎರಡು ವರ್ಷದಿಂದ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ.

ಈ ರಂಗನಾಥನ ಆಶೀರ್ವಾದಿಂದ ರಾಜಕೀಯದಲ್ಲಿ ಬೆಳೆದಿದ್ದೇನೆ. ನನಗೆ ಎಂಟು ವರ್ಷವಿದ್ದಾಗ ಈ ಕಾರ್ಯಕ್ರಮ ನಡೆದಿತ್ತು. ನಾಳೆ ಬಹಳ ಜನ ಭಕ್ತಾಧಿಗಳು ಬರ್ತಾರೆ. ನಾವು ಯಾರಿಗೂ ಹೇಳಿಲ್ಲ, ನಾಳೆ ಅಂತಿಮವಾಗಿ ಕಳಸ ಪ್ರತಿಷ್ಠಾಪನೆ ಮಾಡುತ್ತಾರೆ. ಆದರೆ ನಾನು ಮೇಲೆ ಹತ್ತಿ ಕಳಸಕ್ಕೆ ಪೂಜೆ ಮಾಡಲು ಆಗಲ್ಲ ಎಂದರು.

ನಾನು ದೇವರಿಗೆ ತುಂಬಾ ಆಭಾರಿಯಾಗಿದ್ದೇನೆ. ನನಗೆ ಕಿಡ್ನಿಯಲ್ಲಿ ಸಮಸ್ಯೆ ಕಾಣಿಸಿಕೊಂಡು ತೊಂದರೆ ಆಯ್ತು, ಈಗ ಎಲ್ಲಾ ಸರಿ ಹೋಗಿದೆ. ನಾನು ಆರೋಗ್ಯವಾಗಿರಲು ಡಾಕ್ಟರ್‌ಗಳ ಪ್ರಾಮಾಣಿಕ ಪ್ರಯತ್ನ ಕಾರಣ. ಭಗವಂತನ ಅನುಗ್ರಹ, ನನ್ನ ಅಳಿಯ, ಸುದರ್ಶನ್, ಬಲ್ಲಾಳ್ ಅಂಡ್ ಟೀಂನ ಪ್ರಯತ್ನದಿಂದ ಬದುಕಿದ್ದೇನೆ ಎಂದರು.

ಎಂಭತ್ತು ವರ್ಷದ ಹಿಂದೆ ಈ ಪೂಜೆ ನಡೆದಿತ್ತು. ನನಗೆ ವಯಸ್ಸಿನ ‌ಕಾರಣದಿಂದ ಮಂಡಿ ನೋವಿದೆ. ಆದರೆ ಜ್ಞಾಪಕಶಕ್ತಿ ಇದೆ, ಯಾವ ಇಸವಿಯಲ್ಲೇ ನಡೆದ್ದದ್ದನ್ನು ಹೇಳುತ್ತೇನೆ ಎಂದು ನೆನಪಿನಂಗಳಕ್ಕೆ ಜಾರಿದರು.

ಕಾಂಗ್ರೆಸ್‌ನಿಂದ ಟಿಕೆಟ್ ತಪ್ಪಿತ್ತು. ನಾನಾಗ ಹತ್ತು ರೂಪಾಯಿ ಬಾಡಿಗೆಯ ಮನೆಯಲ್ಲಿ ಇದ್ದೆ. ಐದು ಗಂಟೆ ಬ್ರಾಹ್ಮಿ ಮಹೂರ್ತದಲ್ಲಿ ದೇವರ ದರ್ಶನ ಆಯ್ತು. ಆ ರಂಗನಾಥ ಇದ್ದಾನೆ ಚುನಾವಣೆಗೆ ನಿಂತ್ಕಳಿ ಎಂದು‌ ನನ್ನ ಪತ್ನಿ ಹೇಳಿದರು. ಆಗ ಜನರೇ ದುಡ್ಡ ಹಾಕಿ ಚುನಾವಣೆ ಮಾಡಿದ್ರು, ಹೀಗೆ ಮೊದಲ ಚುನಾವಣೆ ಗೆದ್ದೆ, ಅಲ್ಲಿಂದ ಪ್ರಧಾನಮಂತ್ರಿಯೂ ಆದೆ ಎಂದರು.

ಬೆಂಗಳೂರಿನ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣದ ಬಗ್ಗೆ ಪೂರ್ಣ ವಿವರ ನನ್ನ ಮುಂದೆ ಇಲ್ಲ. ಬಾಂಬ್ ಬ್ಲಾಸ್ಟ್ ಬಗ್ಗೆ ಗೊತ್ತಿಲ್ಲ, ನನ್ನ ಮಗ ಹರದನಹಳ್ಳಿಯಲ್ಲಿ ಟಿವಿ ಹಾಕ್ಸಿಲ್ಲ, ಪೇಪರ್ ಕೂಡ ನೋಡಿಲ್ಲ. ನಾನು, ನನ್ನ ಮನಸ್ಸು ರಂಗನಾಥಸ್ವಾಮಿ ಅಷ್ಟೇ, ಹಾಗೆಂದ ಮಾತ್ರಕ್ಕೆ ರಾಜಕೀಯದಿಂದ ದೂರ ಹೋಗಲ್ಲ ಎಂದು ಹೇಳಿದರು.