ಪತ್ನಿಯನ್ನು ಕೊಂದು ಹೂತಿದ್ದ ಪಾಪಿ ಪತಿ; ೪ ತಿಂಗಳ ನಂತರ ಕೃತ್ಯ ಬಯಲಿಗೆ

ಹಾಸನ: ಪಾಪಿ ಪತಿರಾಯ ಕೈ ಹಿಡಿದ ಪತ್ನಿಯನ್ನೇ ಕೊಂದು ಹೂತಿಟ್ಟಿದ್ದ
ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬರೋಬ್ಬರಿ ಮೂರ‍್ನಾಲ್ಕು ತಿಂಗಳ ಬಳಿಕ
ಪ್ರಕರಣ ಬಯಲಾಗಿದೆ.
ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶಾಂತಿವಾಸು (೨೮) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ.
ಶಾಂತಿವಾಸು ಮತ್ತು ಪವನ್ ಕುಮಾರ್ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ನಂತರ ಇಬ್ಬರೂ ಮುದ್ದಾದ ಮಕ್ಕಳಾದರು. ಈ ಮಧ್ಯೆ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಶುರುವಾಗಿದೆ.
ಇದು ವಿಕೋಪಕ್ಕೆ ಹೋಗಿ ಜಗಳದ ವೇಳೆ ಪತ್ನಿಯನ್ನು ಹಲ್ಲೆ ಮಾಡಿ ನಂತರ ಜೀವ ತೆಗೆದಿದ್ದಾನೆ. ನಂತರ ಪತ್ನಿ ಮೃತಪಟ್ಟಿದ್ದರಿಂದ ಹೆದರಿದ ಪಾಪಿ ಪತಿ, ಇದು ಯಾರಿಗೂ ತಿಳಿಯಬಾರದು ಎಂದು ರಾತ್ರೋರಾತ್ರಿ ಮನೆಯಿಂದ ಅನತಿ ದೂರದಲ್ಲಿರುವ ಹಳ್ಳದ ಪಕ್ಕದ ಗುಂಡಿಯಲ್ಲಿ ಹೂತು ಹಾಕಿ, ಏನೂ ನಡೆದಿಲ್ಲ ಎಂಬಂತೆ ಸುಮ್ಮನಿದ್ದ. ಪೇಂಟಿಂಗ್ ಕೆಲಸ ಮಾಡುತ್ತಿದ್ದ ಪವನ್ ಕುಮಾರ್, ಪತ್ನಿಯನ್ನು ಕೊಂದ ನಂತರ ಮಕ್ಕಳೊಂದಿಗೆ ಬೆಂಗಳೂರಿಗೆ ಹೋಗಿದ್ದ.
ಇತ್ತೀಚೆಗೆ ವಾಸನೆ ಬಂದಿದ್ದರಿಂದ ನಾಯಿಗಳು ಮೃತದೇಹದ ಮೂಳೆಯನ್ನ ಎಳೆದಾಡಿದ್ದವು. ಈ ಬಗ್ಗೆ ಗಮನಿಸಿದ ತೋಟದ ಮಾಲೀಕ ನ.೨ ರಂದು ಶ್ರೀನಿವಾಸ ಎಂಬುವರು ಸಕಲೇಶಪುರ ನಗರಠಾಣೆಗೆ ದೂರು ನೀಡಿದ್ದರು.
ಇಂದು ಅಸ್ಥಿಪಂಜವಾಗಿದ್ದ ಮೃತದೇಹದ ಕಳೇಬರವನ್ನು ಪೊಲೀಸರು ಹೊರ ತೆಗೆದು ತನಿಖೆಗೆ ಒಳ ಪಡಿಸಿದ್ದಾರೆ. ಮಹಿಳೆ ದೇಹ ಸಂಪೂರ್ಣ ಕೊಳೆತು ಹೋಗಿ ಮೂಳೆ ಸ್ಥಿತಿಯಲ್ಲಿದೆ. ಈ ಸಂಬಂಧ ಈಗಾಗಲೇ ಪತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಸ್ಥಳ ಮಹಜರು ನಡೆಸಿ ತನಿಖೆ ಕೈಗೊಂಡಿದ್ದಾರೆ.