ಹಾಸನ: ತನ್ನಿಂದ ಹಲ್ಲೆಗೊಳಗಾದ ಪತ್ನಿ ಪೊಲೀಸರಿಗೆ ದೂರು ನೀಡುತ್ತಾಳೆ ಎಂದು ಕೋಪಗೊಂಡ ಪತಿ, ಆಕೆ ಚಿಕಿತ್ಸೆ ಪಡೆಯುತ್ತಿದ್ದ ಸರ್ಕಾರಿ ಆಸ್ಪತ್ರೆಗೆ ನುಗ್ಗಿ ಸರ್ಜಿಕಲ್ ಬ್ಲೇಡ್ ನಿಂದ ಕೆನ್ನೆ ಹಾಗೂ ಕೈಗಳನ್ನು ಕೊಯ್ದು ಪರಾರಿಯಾದ ಘಟನೆ ಸಕಲೇಶಪುರದಲ್ಲಿ ನಡೆದಿದೆ.
ಪತಿ ನಡೆಸಿದ ಮಾರಣಾಂತಿಕ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಸಕಲೇಶಪುರ ಪಟ್ಟಣದ ಅಗ್ರಹಾರ ಬಡಾವಣೆಯ ಅನುಷಾ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಪತಿ ಶರತ್ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಇಂದು ಬೆಳಗ್ಗೆ ಕ್ಷುಲಕ ಕಾರಣಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿದ್ದು, ಶರತ್ ತನ್ನ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಹೀಗಾಗಿ ಗಾಯಗೊಂಡ ಆಕೆ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಬಂದಿದ್ದರು. ಆಕೆ ಪೊಲೀಸರಿಗೆ ದೂರು ನೀಡುತ್ತಾಳೆ ಎಂದು ಕೋಪಗೊಂಡ ಆತ ಆಸ್ಪತ್ರೆಗೆ ನುಗ್ಗಿ ಅಲ್ಲಿಯೇ ಇದ್ದ ಸರ್ಜಿಕಲ್ ಬ್ಲೇಡ್ ತೆಗೆದುಕೊಂಡು ಕೆನ್ನೆ, ಕೈಗಳನ್ನು ಕೊಯ್ದು ಕೊಲೆ ಮಾಡಲು ಯತ್ನಿಸಿದ.
ಆಸ್ಪತ್ರೆ ಸಿಬ್ಬಂದಿ ಮಧ್ಯಪ್ರವೇಶಿಸಿದ್ದರಿಂದ ಶರತ್ ಅಲ್ಲಿಂದ ಪರಾರಿಯಾದನು. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗಾಯಾಳುವಿನ ಹೇಳಿಕೆ ಪಡೆದುಕೊಂಡಿದ್ದಾರೆ.