ಹಾಸನ, ಮೇ 13: ತನ್ನನ್ನು ತೊರೆದು ಬಂದಿದ್ದ ಪತ್ನಿಯನ್ನು ಗಂಡನೇ ತನ್ನ ಸ್ನೇಹಿತರೊಂದಿಗೆ ಸೇರಿ ಕಾರಿನಲ್ಲಿ ಅಪಹರಿಸಿದ್ದು, ಅಪಹರಣ ತಪ್ಪಿಸಲು ಕಾರಿನ ಡೋರ್‌ಗೆ ನೇತಾಡುತ್ತಿದ್ದ ಆಕೆಯ ತಂದೆಯನ್ನು ಸುಮಾರು 200 ಮೀಟರ್ ಎಳೆದೊಯ್ದು, ಕೆಳಗೆ ಬೀಳಿಸಿ ಗಾಯಗೊಳಿಸಿರುವ ಆಘಾತಕಾರಿ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ಇಂದು ನಡೆದಿದೆ.
ಬೇಲೂರು ತಾಲ್ಲೂಕಿನ ಮಲಸಾವರ ಗ್ರಾಮದ 19 ವರ್ಷದ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ ಎಂಬಾಕೆಯೇ ಆಪಹರಣಕ್ಕೆ ಒಳಗಾದವರು. ಚನ್ನರಾಯಪಟ್ಟಣ ಮೂಲದ 25 ವರ್ಷದ ಪ್ರಜ್ವಲ್ ಎಂಬಾತನ ಜತೆ ಎರಡು ತಿಂಗಳ ಹಿಂದಷ್ಟೇ ಪ್ರೇಮ ವಿವಾಹವಾಗಿದ್ದ ಪ್ರಸ್ಟಲ್, ಗಂಡನನ್ನು ಬಿಟ್ಟು ತಂದೆಯ ಜತೆ ಅರೇಹಳ್ಳಿಗೆ ಬಂದಿದ್ದರು.
ಇಂದು ಪ್ರಜ್ವಲ್ ಹಾಗೂ ಆತನ ಸ್ನೇಹಿತರು ಕಾರಿನಲ್ಲಿ ಬಂದು, ಅರೇಹಳ್ಳಿ ಪಟ್ಟಣದ ಹೈಸ್ಕೂಲ್ ಮುಂಭಾಗದಲ್ಲಿ ಯುವತಿಯನ್ನು ಕಿಡ್ನಾಪ್ ಮಾಡಿದ್ದಾರೆ.
ತಂದೆಯ ಪರದಾಟ: ಘಟನೆ ವೇಳೆ ತನ್ನ ಮಗಳನ್ನು ರಕ್ಷಿಸಲು ಕಾರನ್ನು ತಡೆಯಲು ಧಾವಿಸಿದ ತಂದೆ, ಕಾರಿನ ಡೋರ್‌ಗೆ ನೇತಾಡಿದ್ದಾರೆ. ಆದರೆ, ಕಿಡಿಗೇಡಿಗಳು ಕಾರನ್ನು ತಡೆಯದೆ ಸುಮಾರು 200 ಮೀಟರ್ ದೂರ ಎಳೆದೊಯ್ದಿದ್ದಾರೆ. ಈ ಘರ್ಷಣೆಯಲ್ಲಿ ಕಾರಿನಿಂದ ಬಿದ್ದ ತಂದೆಗೆ ಗಾಯಗಳಾಗಿವೆ.
ಪೊಲೀಸ್ ತನಿಖೆ ಆರಂಭ: ಘಟನೆಯು ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.