ದೂರು ಕೊಟ್ಟ ಪತ್ನಿಯ ಕುತ್ತಿಗೆಯನ್ನು ಪೊಲೀಸ್ ಠಾಣೆಯಲ್ಲೇ ಕೊಯ್ದ ಪತಿ!

ಹಾಸನ: ಪೊಲೀಸ್ ಠಾಣೆಯಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಪೊಲೀಸರ ಎದುರೇ ಪತಿಯೊಬ್ಬ ಪತ್ನಿ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ.
ಹಾಸನದ ಮಹಿಳಾ ಪೊಲೀಸ್ ಠಾಣೆಯಲ್ಲಿ ಭಾನುವಾರ ಪತ್ನಿ ಶಿಲ್ಪಾ ಅವರ ಕುತ್ತಿಗೆಗೆ ಚಾಕುವಿನಿಂದ ಕೊಯ್ದ ಪತಿ ಹರೀಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಅನುಮಾನದ ಭೂತ ಹೊಕ್ಕಂತೆ ಪತ್ನಿಯ ನಡತೆಯನ್ನು ಶಂಕಿಸಿ ಪತಿ ಹರೀಶ್ ಹಿಂಸೆ ನೀಡುತ್ತಿದ್ದ. ಇದರಿಂದ ಬೇಸತ್ತ ಶಿಲ್ಪಾ ಮಹಿಳಾ‌ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ಪೊಲೀಸರು ಹರೀಶ್ ನನ್ನು ಠಾಣೆಗೆ ಕರೆಸಿ ಪತ್ನಿ ಎದುರಿನಲ್ಲೇ ವಿಚಾರಣೆ ನಡೆಸಿ ಹೇಳಿಕೆ ಪಡೆಯುತ್ತಿದ್ದರು.
ವಿಚಾರಣೆ ವೇಳೆ ಪತ್ನಿಯ ಆರೋಪಗಳಿಂದ ಕುಪಿತಗೊಂಡ ಆತ ಚಾಕುವಿನಿಂದ ಪತ್ನಿಯ ಕುತ್ತಿಗೆ ಬಲಭಾಗವನ್ನು‌ ಕೊಯ್ದು ಮತ್ತೊಮ್ಮೆ ಇರಿಯಲು ಮುಂದಾದ. ತಕ್ಷಣ ಎಚ್ಚೆತ್ತ ಪೊಲೀಸರು ಆರೋಪಿ ಮೇಲೆ ಎರಗಿ ಆತನ ಕೈಲಿದ್ದ ಚಾಕು ಕಿತ್ತುಕೊಂಡು ವಶಕ್ಕೆ ಪಡೆದರು.
ಆರು ವರ್ಷಗಳ ಹಿಂದೆ ಮದುವೆಯಾಗಿದ್ದ ಶಿಲ್ಪಾ ಹರೀಶ್ ಪರಸ್ಪರ ಅನುಮಾನದಿಂದ ಜಗಳ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಗಾಯಾಳು ಶಿಲ್ಪಾ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.