ಪಟ್ಲಬೆಟ್ಟದಲ್ಲಿ ಗೂಂಡಾಗಿರಿ ಬೆಳೆಯಲು ಕಾರಣ ಯಾರು?: ಸಕಲೇಶಪುರದ ಮರ್ಯಾದೆಗೆ ಸಂಚಕಾರ ತರುತ್ತಿರುವ ಪುಂಡರ ನಿಯಂತ್ರಣಕ್ಕೆ ಯಾಕೆ ಹಿಂದೇಟು?

ಗೂಡ್ಸ್‌ ಪಿಕಪ್‌ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದೇ ಅಪರಾಧ|ಪೊಲೀಸ್‌ ಇಲಾಖೆ ಕಣ್ಮುಚ್ಚಿ ಕುಳಿತಿದ್ದು ಏಕೆ?

ಹಾಸನ: ಬೈಕರ್‌ಗಳ ಮೇಲಿನ ಹಲ್ಲೆಯಿಂದ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶದ ಜ್ವಾಲೆ ಹೊತ್ತಿ ಉರಿಯಲು ಕಾರಣವಾದ ಸಕಲೇಶಪುರ ತಾಲೂಕಿನ ಪಟ್ಲಬೆಟ್ಟದ ಪಿಕಪ್‌ ವಾಹನ ಚಾಲಕರ ಗೂಂಡಾಗಿರಿ ಈ ಮಟ್ಟಿಗೆ ಬೆಳೆಯಲು ಅವಕಾಶವಾಗಿದ್ದಾದರೂ ಹೇಗೆ? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಪಟ್ಲಬೆಟ್ಟ ಪ್ರಾಕೃತಿಕ ಸೌಂದರ್ಯದ ಗಣಿ. ಮೊದಲು ಕೇವಲ ಸ್ಥಳೀಯರಿಗೆ, ಚಾರಣದ ಹವ್ಯಾಸವಿದ್ದ ಪರಿಸರವಾದಿಗಳಿಗೆ ಮಾತ್ರವೇ ಪರಿಚಿತವಾಗಿದ್ದ ಈ ಸ್ಥಳ, ಸಾಮಾಜಿಕ ಜಾಲತಾಣದ ಆರ್ಭಟ ಆರಂಭವಾದ ನಂತರ ಪಿಕ್ನಿಕ್‌ಸ್ಪಾಟ್‌ ಆಗಿ ಪರಿವರ್ತನೆ ಆಗಿದೆ.

ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಬೆಟ್ಟಕ್ಕೆ ಕಾನೂನು ಅನ್ವಯಿಸಿದರೆ ಸಾರ್ವಜನಿಕರ ಪ್ರವೇಶವೇ ಅತಿಕ್ರಮಣ ಎಂದು ಭಾವಿಸಿ ಕ್ರಮ ಜರುಗಿಸಬೇಕಾಗುತ್ತದೆ. ಆದರೆ ಈ ವಿಷಯದಲ್ಲಿ ಅರಣ್ಯ ಇಲಾಖೆಯೂ ಆರಂಭದಲ್ಲಿ ಕಾನೂನು ಅನ್ವಯಿಸಲು ಹೋಗದೆ ಪರಿಸರ ಪ್ರವಾಸ ಇಷ್ಟಪಡುವ ಜನರ ಮುಕ್ತ ಓಡಾಟಕ್ಕೆ ಅವಕಾಶ ನೀಡಿತ್ತು.

ವನಗೂರು ಗ್ರಾಪಂ ಫಲಕದಲ್ಲಿನ ಅಂಶಗಳ ವಿರುದ್ಧ ಇನ್ಸ್ಟಾಗ್ರಾಂನಲ್ಲಿ ಸಾರ್ವಜನಿಕರ ಆಕ್ರೋಶ

ಆದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದ ಪಟ್ಲಬೆಟ್ಟದ ಸೌಂದರ್ಯ ಕಂಡು ರಾಜ್ಯ, ದೇಶದ ಮೂಲೆಮೂಲೆಯಿಂದ ಜನರು ರಜಾದಿನಗಳಲ್ಲಿ ನೂರಾರು, ಸಾವಿರಾರು ಸಂಖ್ಯೆಯಲ್ಲಿ ಹರಿದುಬರಲು ಆರಂಭಿಸಿದ ನಂತರ ಅಲ್ಲಿ ಸಂಚಾರ ಸಮಸ್ಯೆ ತಲೆದೋರಿತು.

ಅಲ್ಲದೆ ಕಡಿದಾದ ಕಚ್ಚಾರಸ್ತೆ ಮಾತ್ರವೇ ಇರುವುದರಿಂದ ಸಾಮಾನ್ಯ ವಾಹನಗಳು ಬೆಟ್ಟಕ್ಕೆ ಹೋಗುವುದು ಸಾಧ್ಯವಿರಲಿಲ್ಲ. ಅದನ್ನೇ ಬಂಡವಾಳ ಮಾಡಿಕೊಂಡ ಕೆಲವು ಸ್ಥಳೀಯರು ಜೀಪ್‌, ಪಿಕಪ್‌ ವಾಹನಗಳಲ್ಲಿ ಜನರನ್ನು ಬೆಟ್ಟಕ್ಕೆ ಕರೆದೊಯ್ದು, ವಾಪಸ್‌ ಕರೆತಂದು ಬಿಡುವ ಬಾಡಿಗೆ ವ್ಯವಹಾರ ಆರಂಭಿಸಿದರು. ಅದು ಲಾಭದಾಯಕವೂ ಆಯಿತು. ಆದರೆ ಎಲ್ಲೆಡೆಯಂತೆ ಹಣವಿದ್ದಲ್ಲಿ ವಿವಾದವೂ ಆರಂಭವಾಯಿತು. ಪಿಕಪ್‌ ವಾಹನ ಮಾಲೀಕರ ನಡುವೆಯೂ ತಿಕ್ಕಾಟಗಳಾದವು.

ಪಟ್ಲಬೆಟ್ಟದ ತುದಿಯಲ್ಲಿ ಪಿಕಪ್ ವಾಹನಗಳು

ಅಷ್ಟರಲ್ಲಾಗಲೇ ಈ ಭಾಗದ ಹಲವಾರು ಯುವಕರು ಪಟ್ಲಬೆಟ್ಟಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಬಾಡಿಗೆ ವ್ಯವಹಾರದ ಮೂಲಕವೇ ಆರ್ಥಿಕವಾಗಿ ಲಾಭದಾಯಕ ಸ್ಥಿತಿ ತಲುಪಿದ್ದರು. ಇನ್ನೂ ಹಲವರು ಅದೇ ವ್ಯವಹಾರಕ್ಕೆ ಇಳಿಯುವ ಆಸಕ್ತಿ ಹೊಂದಿದ್ದರು.

ಹೀಗಾಗಿ ಅರಣ್ಯ ಇಲಾಖೆ ಬೆಟ್ಟಕ್ಕೆ ವಾಹನ ಪ್ರವೇಶ ಬಂದ್‌ ಮಾಡಿ ಕಚ್ಚಾರಸ್ತೆಗೆ ಟ್ರಂಚ್‌ ಹೊಡೆಯಿತು. ಇದರಿಂದ ಪ್ರವಾಸಿಗರಿಗೆ ನಡೆದೇ ಸಾಗುವ ಅನಿವಾರ್ಯತೆ ಬಂದೊದಗಿದರೆ, ಪವಾಸಿಗರ ಬಾಡಿಗೆ ನಂಬಿಕೊಂಡಿದ್ದ ಸ್ಥಳೀಯರ ವ್ಯವಹಾರಕ್ಕೂ ಹೊಡೆದ ಬಿದ್ದಿತು.

ಹೀಗಾಗಿ ಇಲ್ಲಿ ಆರ್ಥಿಕ ಹಿತಾಸಕ್ತಿ ಹೊಂದಿದ್ದವರೆಲ್ಲ ಒಂದುಗೂಡಿ ಸ್ಥಳೀಯ ಶಾಸಕರು, ರಾಜಕಾರಣಿಗಳ ಮೊರೆ ಹೋದರು. ಅವರ ಮೂಲಕ ಅರಣ್ಯ ಸಚಿವರ ಮೇಲೆ ಒತ್ತಡ ಹೇರಿ ಪಟ್ಲಬೆಟ್ಟಕ್ಕೆ ಹಿಂದಿನಂತೆ ಪ್ರವಾಸಿಗರನ್ನು ಕರೆದೊಯ್ಯುವ ವ್ಯವಸ್ಥೆ ಮರುಸ್ಥಾಪಿಸಿಕೊಂಡರು.

ಇದಕ್ಕೆ ವನಗೂರು ಗ್ರಾಮ ಪಂಚಾಯಿತಿಯೂ ಕೈಜೋಡಿಸಿತು. ಬೆಟ್ಟಕ್ಕೆ ಬೇರೆ ವಾಹನಗಳ ಸಂಚಾರ ನಿಷೇಧಿಸಿದ ಫಲಕ ಅಳವಡಿಸಿದ್ದಲ್ಲದೆ ಸ್ಥಳೀಯರ ವಾಹನಗಳಿಗೆ ಮಾತ್ರವೇ ಪ್ರವೇಶ ಎನ್ನುವ ಶರತ್ತು ವಿಧಿಸುವ ಮೂಲಕ ತನ್ನ ವ್ಯಾಪ್ತಿಮೀರಿ ವರ್ತಿಸಿತು. ಅಲ್ಲದೇ ಪಿಕಪ್‌ ವಾಹನ ಚಾಲಕರಿಗೆ ನೇರವಾಗಿಯೇ ಬೆಂಬಲ ನೀಡಿತು. ಆದರೆ ಬಾಡಿಗೆ ದರವನ್ನೇನೂ ನಿಗದಿ ಮಾಡಲಿಲ್ಲ.

ಆರಂಭದಲ್ಲಿ ಪ್ರತಿ ಟ್ರಿಪ್‌ ಗೆ 500-700 ರೂ. ಬಾಡಿಗೆ ಪಡೆಯುತ್ತಿದ್ದ ಪಿಕಪ್‌ ಚಾಲಕರು ಬೇಡಿಕೆ ಹೆಚ್ಚಿದಂತೆ ತಮ್ಮ ಮನಸೋಇಚ್ಛೆ ಬಾಡಿಗೆ ನಿಗದಿಪಡಿಸಲಾರಂಭಿಸಿದರು. ಅದು 2000ರೂ. ಕೂಡ ದಾಟಿತು. ಪ್ರವಾಸ ಬರುವ ಅನ್ಯಭಾಷಿಕರ ಸುಲಿಗೆಯೂ ಆರಂಭವಾಯಿತು. ಯಾರಾದರೂ ಖಾಸಗಿ ವಾಹನದಲ್ಲಿ ಬೆಟ್ಟಕ್ಕೆ ಹೋಗಲು ಯತ್ನಿಸಿದರೆ ಅವರನ್ನು ತಡೆದು ಬೆದರಿಕೆ ಒಡ್ಡುವ, ಹಲ್ಲೆ ನಡೆಸುವ ಮಾರ್ಗ ಅನುಸರಿಸಲಾಯಿತು. ಇವರ ಆಟಾಟೋಪದಿಂದ ಹಲವಾರು ಪ್ರವಾಸಿಗರ ಹಲ್ಲೆಗೊಳಗಾದ ನಿದರ್ಶನಗಳಿವೆ. ಆದರೆ ಯಾರೂ ಸ್ಥಳೀಯರ ಆರ್ಭಟದ ಎದುರಿಸಿ ನಿಂತು ದೂರು ನೀಡಿರಲಿಲ್ಲ.

ಒಂದೆಡೆ ಸ್ಥಳೀಯ ಎನ್ನುವ ಹಣೆಪಟ್ಟಿ, ಗ್ರಾಪಂ ಬೆಂಬಲ, ಸ್ಥಳೀಯ ರಾಜಕಾರಣಿಗಳ ಆಶೀರ್ವಾದಗಳಿಂದ ಉಬ್ಬಿಹೋದ ಪಿಕಪ್‌ ಚಾಲಕರು/ಮಾಲೀಕರು ಅರಣ್ಯ ಇಲಾಖೆಯ ಆಸ್ತಿ ಬಳಸಿಕೊಂಡು ತಮ್ಮದೇ ನಿಯಮಗಳನ್ನು ರೂಪಿಸಿ ಹಣ ಮಾಡುವ ರಹದಾರಿ ಪಡೆದುಕೊಂಡರು.

ಅದರಂತೆಯೇ ಮೊನ್ನೆ ಬೆಟ್ಟಕ್ಕೆ ಹೋದ ಬೈಕರ್‌ಗಳಿಗೂ ಧಮಕಿ ಹಾಕಿ, ಹಲ್ಲೆ ನಡೆಸಿದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಕ್ರಿಯಾಶೀಲವಾಗಿರುವ ಬೈಕರ್‌ಗಳ ಹೆಲ್ಮೆಟ್‌ಗಳಲ್ಲಿದ್ದ ಕ್ಯಾಮರಾ ಎಲ್ಲ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿತ್ತು. ಹೀಗಾಗಿ ಚಾಲಕರ ಹಲ್ಲೆ ದೊಡ್ಡಸುದ್ದಿಯಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಆಕ್ರೋಶ ಬೆಟ್ಟದ ದಾರಿಯನ್ನು ಬಂದ್‌ ಮಾಡಿಸಿದೆ. ಹಲ್ಲೆಕೋರರ ಬಂಧನವಾಗಿದೆ.

ಆದರೆ ಕೆಲವೇ ದಿನಗಳಲ್ಲಿ ಹಿಂದಿನಂತೆ ರಾಜಕೀಯ ಒತ್ತಡ, ಪ್ರಭಾವಗಳಿಂದ ಎಲ್ಲವೂ ಯಥಾಸ್ಥಿತಿಗೆ ಮರಳಲಿದೆ. ಪ್ರವಾಸಿಗರ ಸುಲಿಗೆ, ಗೂಂಡಾಗಿರಿ ತಲೆಎತ್ತಲಿದೆ ಎನ್ನುವ ಆತಂಕ ಪ್ರಜ್ಞಾವಂತರನ್ನು ಕಾಡುತ್ತಿದೆ.