ಹಾಸನ: ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ರೇವಣ್ಣ ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರವಿದೆ ಎನ್ನುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪ ಸತ್ಯಕ್ಕೆ ದೂರವಾಗಿದೆ. ಯಾವುದೇ ರಾಜಕೀಯ ಷಡ್ಯಂತ್ರ ನಡೆದಿಲ್ಲ ಎಂದು ಗೃಹಸಚಿವ ಜಿ.ಪರಮೇಶ್ವರ್ ಹೇಳಿದರು.
ಪೊಲೀಸರು ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಂಡಿದ್ದಾರೆ, ಅರೆಸ್ಟ್ ಮಾಡಿದ್ದಾರೆ. ಕಾನೂನು ಕ್ರಮ ಮುಂದುವರೆಯುತ್ತದೆ. ಇದರಲ್ಲಿ ನನ್ನ ಅಭಿಪ್ರಾಯದ ಪ್ರಕಾರ ಏನೂ ನಡೆಯಲ್ಲ, ಕಾನೂನಿನ ಪ್ರಕಾರವೇ ನಡೆಯುತ್ತದೆ ಎಂದು ಸೋಮವಾರ ಸುದ್ದಿಗಾರರಿಗೆ ಹೇಳಿದರು.
ಆ ಪ್ರಕರಣದ ಬಗ್ಗೆ ಕಾನೂನಾತ್ಮಕವಾಗಿ ಕ್ರಮ ಜರುಗಿಸಿದ್ದಾರೆ. ದೂರು ಬಂದ ನಂತರವೇ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದಾರೆ. ನಮ್ಮ ಸರ್ಕಾರ ಬಂದ ಮೇಲೆ ನೇಮಿಸಿರುವ ಎಲ್ಲಾ ಎಸ್‌ಐಟಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಎಂದರು.
ಸೂರಜ್ ಅವರು ಕೊಟ್ಟಿರುವ ದೂರನ್ನೂ ತನಿಖೆಯನ್ನು ಮಾಡುತ್ತಾರೆ. ಅಂತಿಮವಾಗಿ ಏನು ವರದಿ ಬರುತ್ತದೆ ಎನ್ನುವುದನ್ನು ಈಗಲೇ ಹೇಳಲು ಆಗುವುದಿಲ್ಲ ಎಂದರು.